ದಿನದ ಸುದ್ದಿ

ಟಿ.ನರಸೀಪುರ | ಕೋವಿಡ್ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುತ್ತಿಲ್ಲ : ತಾ.ಪಂ. ಸದಸ್ಯರ ಆರೋಪ

Published

on

ಸುದ್ದಿದಿನ,ಟಿ. ನರಸೀಪುರ: ಕೋವಿಡ್ ಉಪಕೇಂದ್ರದಲ್ಲಿ ರೋಗಿಗಳಿಗೆ ಒಳ್ಳೆಯ ಆಹಾರ ನೀಡುತ್ತಿಲ್ಲವಾದ್ದರಿಂದ ಇದರ ಹೊಣೆಯನ್ನು ತಾಲ್ಲೂಕು ಆಡಳಿತ ಹೊರಬೇಕೆಂದು ತಾ.ಪಂ. ಸದಸ್ಯರುಗಳಾದ ರಾಮಲಿಂಗಯ್ಯ ಹಾಗೂ ಕುಕ್ಕೂರು ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲ್ಲೂಕು ಆಡಳಿತ ವರ್ಗ ಕೂಡ್ಲೂರು ಗ್ರಾಮದಲ್ಲಿರುವ ಕೋವಿಡ್ ಉಪಕೇಂದ್ರದಲ್ಲಿ ಕೊರೊನಾ ಸೋಂಕಿತರಿಗೆ ಬಿಸಿಯಿಂದ ಕೂಡಿದ ಒಳ್ಳೆಯ ಊಟ ಉಪಚಾರ ನೀಡದೆ ತಾತ್ಸಾರ ಮನೋಭಾವನೆಯಿಂದ ಕಾಣಲಾಗುತ್ತಿದ್ದು, ಸೇವೆ ಮಾಡಲು ಇಷ್ಟವಿಲ್ಲದಿದ್ದರೆ ಅಧಿಕಾರಿಗಳು ಹೊರ ನಡೆಯಬೇಕೆಂದು ಆಕ್ರೋಶದ ನುಡಿಗಳನ್ನಾಡಿ, ಇದಕ್ಕೆ ತಹಶಿಲ್ದಾರ್‍ರವರು ಉತ್ತರ ನೀಡಬೇಕೆಂದರು.

ತಹಶಿಲ್ದಾರ್ ಡಿ. ನಾಗೇಶ್ ಮಾತನಾಡಿ, ಊಟ-ತಿಂಡಿಯ ಲೋಪದೋಷದ ಬಗ್ಗೆ ಸಭೆಯ ಗಮನಕ್ಕೆ ತಂದಿರುವುದರಿಂದ ಈಗಾಗಲೆ ನೀಡುತ್ತಿದ್ದ ಕೇಟರಿಂಗ್‍ರವರನ್ನು ಬಸಲಾಯಿಸಿ ತತಕ್ಷಣದಿಂದಲೇ ಬೇರೆಯವರಿಗೆ ಗುತ್ತಿಗೆ ನೀಡಲಾಗುವುದು. ಇನ್ನು ಮುಂದೆ ಈ ವಿಷಯವಾಗಿ ದೂರುಗಳು ಬಾರದ ಹಾಗೆ ಕ್ರಮ ವಹಿಸುವುದಾಗಿ ಸಭೆಯಲ್ಲಿ ಸ್ಪಷ್ಟಪಡಿಸಿದಾಗ ಆ ವಿಷಯವನ್ನು ಅಂತ್ಯಗೊಳಿಸಲಾಯಿತು.

ವಿಶೇಷ ಕಾರ್ಯಾಗಾರ: ಕಳೆದ 2 ವರ್ಷಗಳಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಮೈಸೂರು ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಫಲಿತಾಂಶ ಟಿ. ನರಸೀಪುರ ತಾಲ್ಲೂಕಿನದ್ದಾಗಿದ್ದು, ಇದು ತಲೆ ತಗ್ಗಿಸುವ ವಿಚಾರವಾಗಿದೆ. 2020-21ನೇ ಸಾಲಿನಲ್ಲಿ ಉತ್ತಮ ಫಲಿತಾಂಶ ಬರಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಕಾರ್ಯಾಗಾರವನ್ನು ಏರ್ಪಡಿಸಿ ಉತ್ತಮಗೊಳಿಸಲು ಸಜ್ಜಾಗುತ್ತಿದ್ದೇವೆಂದು ಬಿಇಒ ಮರಿಸ್ವಾಮಿ ಸಭೆಯ ಗಮನಕ್ಕೆ ತಂದರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳಿಂದ 619 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದು, ಕೆಲವು ಕಡೆ ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿರುವುದು ಸಹ ಕಾರಣವಾಗಿರಬಹುದೆಂದು ತಿಳಿಸಿದರು.
ರಾಜಕಾರಣಿಗಳಾಗಿ: ಕೆಲವು ಸರ್ಕಾರಿ ಶಾಲಾ ಶಿಕ್ಷಕರು ಬೋಧನೆ ಮಾಡುವ ಬದಲು ರಾಜಕಾರಣದ ಕಡೆ ಹೆಚ್ಚು ಒಲವನ್ನು ತೋರುತ್ತಿದ್ದು, ಶಾಲಾ ಅವಧಿಯಲ್ಲಿ ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ.

ಇವರು ಸಂಪೂರ್ಣವಾಗಿ ಶಿಕ್ಷಕ ವೃತ್ತಿಯನ್ನು ಮಾಡದೆ ಇತ್ತ ರಾಜಕಾರಣದಲ್ಲೂ ತೊಡಗಿಸಿಕೊಳ್ಳದೆ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುತ್ತಿದ್ದು, ಮಕ್ಕಳಿಗೆ ಅವರು ತೆಗೆದುಕೊಳ್ಳುವ ವಿಷಯದ ಬಗ್ಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿಲ್ಲ. ಹಾಗಾಗಿ ಸಂಪೂರ್ಣವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತೆ ಸದಸ್ಯ ಕುಕ್ಕೂರು ಗಣೇಶ್ ವ್ಯಂಗ್ಯವಾಡಿದರು.

ಗುಂಪುಗಾರಿಕೆ: ಶಿಕ್ಷಕರು ಸದಾಕಾಲ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೂ ಸಹ ಮಾದರಿಯಾಗುವಂತಹ ಗುಣಲಕ್ಷಣಗಳನ್ನ ಅಳವಡಿಸಿಕೊಳ್ಳಬೇಕು. ಅದು ಬಿಟ್ಟು ಶಾಲೆಯಲ್ಲಿಯೇ ಕೆಲವು ಶಿಕ್ಷಕರುಗಳು ಗುಂಪುಗಾರಿಕೆಯನ್ನು ಮಾಡುತ್ತಾ, ಇದು ಮಕ್ಕಳ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿದೆ. ಇವರೇ ಹೀಗಾದರೆ ಮಕ್ಕಳಲ್ಲಿ ಗುಂಪುಗಾರಿಕೆಗಳು ಕಂಡುಬಂದಾಗ ಇವರು ಯಾವ ಮಾದದಂಡದಲ್ಲಿ ಅವರಿಗೆ ಬುದ್ಧಿ ಹೇಳುತ್ತಾರೆಂದು ಪ್ರಶ್ನೆಯೂ ಸಹ ಕುಕ್ಕೂರು ಗಣೇಶ್ ಮುಂದಿಟ್ಟರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ರಮೇಶ್ ಮಾತನಾಡಿ, ಇಂದಿನ ಸಭೆಯಲ್ಲಿ ಇಲಾಖಾವಾರು ಆಗಬೇಕಿರುವ ಕೆಲಸ ಕಾರ್ಯಗಳನ್ನು ಮುಂದಿನ ಸಾಮಾನ್ಯ ಸಭೆಯಲ್ಲಿ ಕಾರ್ಯಗತ ಮಾಡಿರಬೇಕು. ಹಾಗೂ ಅದರ ಸಾದಕ ಬಾದಕಗಳನ್ನ ಪುರಾವೆ ಸಹಿತಿ ಸಭೆಗೆ ಒಪ್ಪಿಸಬೇಕೆಂದು ಅಧಿಕಾರಿಗಳಿಗೆ ತಾಖೀತು ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸುಂದ್ರಮ್ಮ, ತಾ.ಪಂ. ಇಒ ಜೆರಾಲ್ಡ್‍ರಾಜೇಶ್, ಸದಸ್ಯರುಗಳಾದ ನಾಗಮಣಿ, ಸಾಜಿದ್‍ಅಹಮದ್, ಚಂದ್ರಶೇಖರ್, ರಂಗಸ್ವಾಮಿ, ಶಿವಮ್ಮ, ಚಿನ್ನಮ್ಮಸಿದ್ದರಾಜು, ಲೋಲಾಕ್ಷಿ, ಜವರಯ್ಯ, ರತ್ನರಾಜು ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version