ದಿನದ ಸುದ್ದಿ
ಕೋವಿಡ್ ಮರಣ ಪ್ರಮಾಣ ಇಳಿಕೆಗೆ ಪರಿಣಾಮಕಾರಿ ಕ್ರಮಕ್ಕೆ ಯಡಿಯೂರಪ್ಪ ಸೂಚನೆ
ಸುದ್ದಿದಿನ,ಹಾಸನ : ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬೆಂಗಳೂರು ನಗರ ಹೊರತುಪಡಿಸಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಹಾಗೂ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಎಲ್ಲಾ ಜಿಲ್ಲೆಗಳಲ್ಲಿಯೂ ಕೋವಿಡ್ ಮರಣ ಪ್ರಕರಣಗಳನ್ನು ಶೇಕಡ 1 ಕ್ಕಿಂತ ಕಡಿಮೆಗೆ ಇಳಿಸಲು ವಿಶೇಷ ಪ್ರಯತ್ನ ಮಾಡಬೇಕು ವೈದ್ಯಕೀಯ ಚಿಕಿತ್ಸಾ ವಿಧಾನದಲ್ಲಿ ಸುಧಾರಣೆಯಾಗಬೇಕು. ಟೆಲಿಮೆಡಿಸಿನ್ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ಜಿಲ್ಲಾಡಳಿತಗಳಿಗೆ ಸೂಚಿಸಿದರು.
ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸಾವುಗಳ ಕುರಿತು ಅವಲೋಕನ ನಡೆಸಿ ನಿಖರ ಕಾರಣಗಳ ಪತ್ತೆ ಕಾರ್ಯ ಮಾಡುವುದರ ಜೊತೆಗೆ ಆರ್.ಟಿ.ಪಿ.ಸಿ.ಆರ್. ತಪಾಸಣೆಗಳ ಸಂಖ್ಯೆ ಹೆಚ್ಚಿಸಬೇಕು ಎಂದರಲ್ಲದೆ, ಆಮ್ಲಜನಕ ಸರಬರಾಜು ಇರುವ ಬೆಡ್‍ಗಳ ಪ್ರಮಾಣ ಹೆಚ್ಚಿಸಬೇಕು ಹಾಗೂ ತಾಲ್ಲೂಕು ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಕೋವಿಡ್ ಚಿಕಿತ್ಸೆಗೆ ಹಣಕಾಸಿನ ಕೊರತೆ ಇಲ್ಲ ಹೆಚ್ಚಿನ ವೈದ್ಯಕೀಯ ತಂಡ ಹಾಗೂ ಸಂಚಾರಿ ತಂಡಗಳನ್ನು ರಚಿಸಿ ತಪಾಸಣೆ ಹೆಚ್ಚಿಸಿ ಪಾಸಿಟಿವ್ ಸಂಖ್ಯೆಗಳನ್ನು ಕಡಿಮೆ ಮಾಡಿ ಹಾಗೂ ಸೋಂಕಿತರ ಪ್ರಥಮ ಸಂಪರ್ಕಿತರನ್ನು ನಿಖರವಾಗಿ ಪತ್ತೆ ಮಾಡಿ ಪರೀಕ್ಷೆ ನಡೆಸಿ ಅಗತ್ಯವಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲು ನಿಗಾವಹಿಸಿ ವೈದ್ಯಕೀಯ ನೆರವು ನೀಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಮೈಸೂರಿನಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿವೆ ದಸರಾ ಉತ್ಸವ ಸಂಘಟನೆ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದರು.
ಸಚಿವರಾದ ಬಸವರಾಜ್ ಬೊಮ್ಮಯಿ, ಡಾ||ಸುಧಾಕರ್, ಆರ್.ಅಶೋಕ್, ಕೆ.ಗೋಪಾಲಯ್ಯ, ಶ್ರೀನಿವಾಸ್ ಪೂಜಾರಿ, ಸೋಮಶೇಖರ್ ಮತ್ತಿತರರು ಸಹ ವಿಡಿಯೋ ಸಂವಾದದಲ್ಲಿ ಪಾಲ್ಗೋಂಡು ಸಲಹೆ ಸೂಚನೆ ನೀಡಿದರು. ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಇತರ ಅಧಿಕಾರಿಗಳು ಜಿಲ್ಲಾಡಳಿತಗಳಿಗೆ ಹಲವು ನಿರ್ದೇಶನ ಹಾಗೂ ಸೂಚನೆಗಳನ್ನು ನೀಡಿದರು.
ಶಾಸಕರಾದ ಸಿ.ಎನ್.ಬಾಲಕೃಷ್ಣ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರಿನಿವಾಸಗೌಡ ಹಾಗೂ ಇತರರು ಹಾಜರಿದ್ದರು.
ವಿಡಿಯೋ ಸಂವಾದದ ನಂತರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡುವಂತೆ ಮುಖ್ಯ ಮಂತ್ರಿಯವರು ಸೂಚನೆ ನೀಡಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಮತ್ತು ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಪರೀಕ್ಷೆ ಮಾಡುವಂತೆ ಹಾಗೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ ಶೆ.100 ರಷ್ಟು ಗುರಿ ಸಾಧಿಸಲು ಮುಖ್ಯಮಂತ್ರ್ರಿಯವರು ಸೂಚಿಸಿದ್ದು, ಕ್ರಮವಹಿಸಲಾಗುತ್ತದೆ ಎಂದರು.
ಕೋವಿಡ್ ಪರೀಕ್ಷೆ ಮಾಡಲು ಹೆಚ್ಚಿನ ಮೊಬೈಲ್ ಟೀಂ ಗಳನ್ನು ಮಾಡಿ ಪರೀಕ್ಷೆ ಮಾಡಲು ಮತ್ತು ಹೋಂ ಐಸೋಲೇಷನ್ ನಲ್ಲಿರುವವರ ಮೇಲೆ ನಿಗಾ ವಹಿಸಲು ಮತ್ತು ಪರೀಕ್ಷೆ ಮಾಡಲು ಪ್ರತ್ಯೇಕ ಗುಂಪು ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಸೋಂಕಿತರಿಗೆ ಅವಶ್ಯಕವಿರುವ ಬೆಡ್‍ಗಳ ವ್ಯವಸ್ಥೆ ಹಾಗೂ ಆಮ್ಲಜನಕ ಕೊರತೆಯಾಗದಂತೆ ವ್ಯವಸ್ಥಿತವಾಗಿ ಕ್ರಮಕೈಗೊಳ್ಳಲಾಗಿದೆ ಹಾಗೂ ಹೋಂ ಐಸೋಲೇಷನ್‍ನಲ್ಲಿರುವವರಿಗೆ ವೈದ್ಯರ ತಂಡಗಳನ್ನು ರಚಿಸಿ ಆರೋಗ್ಯ ವಿಚಾರಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243