ದಿನದ ಸುದ್ದಿ

ಚಳಿಗಾಲದಲ್ಲಿ ಕೊರೊನಾ ಹೆಚ್ಚುವ ಸಂಭವ-ಅಗತ್ಯ ಸಿದ್ದತೆ-ಜನ ಮೈಮರೆಯುವಂತಿಲ್ಲ: ಮಹಾಂತೇಶ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಎಲ್ಲರ ಪ್ರಯತ್ನದಿಂದ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ಮತ್ತು ಮರಣ ಪ್ರಮಾಣಗಳೆರಡೂ ಕಡಿಮೆಯಾಗಿರುವುದು ಸಂತಸದ ವಿಚಾರವಾದರೂ ಯಾರೋಬ್ಬರೂ ಮೈಮರೆಯಬಾರದು.

ಕೊರೊನಾ ಪ್ರಕರಣ ಕಡಿಮೆಯಾದ ಮಾತ್ರಕ್ಕೆ ಕೊರೊನಾ ಯುದ್ದ ಗೆದ್ದ ಭಾವನೆ ಸಲ್ಲದು. ಚಳಿಗಾಲದ ವಾತಾವರಣದಲ್ಲಿ ಇದು ಹೆಚ್ಚಾಗುವ ಸಂಭವವಿದ್ದು ಎಲ್ಲರೂ ಮೊದಲಿಗಿಂತ ಹತ್ತು ಪಟ್ಟು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೋವಿಡ್ 19 ಸಂಬಂಧ ಮಾಹಿತಿ ನೀಡಲು ಶುಕ್ರವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಡಿ ಗ್ರೂಪ್ ಆದಿಯಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕೆ ಬಂದಿದೆ. ಹಾಗೂ ಮರಣ ಪ್ರಮಾಣ ಸರಾಸರಿ ಶೇ.1.2 ಇದೆ. ಪ್ರತಿ ದಿನ 60, 70 ಹೀಗೆ 100 ರ ಒಳಗೆ ಕೊರೊನಾ ಪ್ರಕರಣ ಬರುತ್ತಿವೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಇಂದು ಕೇವಲ 87 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿ ಕೇವಲ 01 ರೋಗಿಗೆ ಮಾತ್ರ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಜಿಲ್ಲೆಯಲ್ಲಿ ಒಟ್ಟು 11 ಜನ ಮಾತ್ರ ವೆಂಟಿಲೇಟರ್‍ನಲ್ಲಿದ್ದಾರೆ.

ಪ್ರತಿದಿನ 2 ರಿಂದ ಎರಡೂವರೆ ಸಾವಿರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದರೂ ನೂರಕ್ಕಿಂತ ಕಡಿಮೆ ಪ್ರಕರಣ ದಾಖಲಾಗುತ್ತಿದ್ದು, ಗಂಭೀರ ಪ್ರಕರಣಗಳ್ಯಾವೂ ದಾಖಲಾಗುತ್ತಿಲ್ಲ. ಶೀಘ್ರ ಆಸ್ಪತ್ರೆಗೆ ದಾಖಲು, ವೆಂಟಿಲೇಟರ್‍ಗೆ ಹೋಗದಂತೆ ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ನೀಡುತ್ತಿರುವುದು ಗಂಭೀರ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಹಾಗು ಪ್ರತಿ ಹಂತದಲ್ಲಿ ವೈದ್ಯರ ಪರಿಶ್ರಮ ಅಭಿನಂದನಾರ್ಹವಾಗಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 728 ಸಕ್ರಿಯ ಪ್ರಕರಣ ಮಾತ್ರ ಇದ್ದು ಇದರಲ್ಲಿ 400 ಕ್ಕೂ ಹೆಚ್ಚು ಜನರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ(ಸಿಸಿಸಿ) 25 ಜನ ಮಾತ್ರ ಇದ್ದಾರೆ. ಹರಿಹರ, ಚನ್ನಗಿರಿ, ಜಗಳೂರು ತಾಲ್ಲೂಕಿನ ಸಿಸಿಸಿ ಗಳಲ್ಲಿ ಯಾವುದೇ ಸೋಂಕಿತರು ಇರುವುದಿಲ್ಲ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version