ದಿನದ ಸುದ್ದಿ

ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಕಂಡು ಬಂದಿಲ್ಲ : ಸಿಎಂ ಬೊಮ್ಮಾಯಿ

Published

on

ಸುದ್ದಿದಿನ, ಬೆಂಗಳೂರು : ದೆಹಲಿಯಲ್ಲಿ ನಾಡಿದ್ದು ಶನಿವಾರ ನಡೆಯಲಿರುವ ಎಲ್ಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗವಹಿಸಲು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮೇಳನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಮತ್ತಿತರ ಗಣ್ಯರು ಭಾಗವಹಿಸುತ್ತಿದ್ದಾರೆ. ನ್ಯಾಯಾಂಗ ವಲಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಚರ್ಚೆ ನಡೆಯಲಿದೆ ಎಂದರು.

ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಕಂಡು ಬಂದಿಲ್ಲ. ಈ ತಿಂಗಳ 9 ರ ನಂತರ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಐರೋಪ್ಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಲಸಿಕೆ ಪಡೆಯದವರಲ್ಲಿ ಸೋಂಕು ಕಂಡು ಬಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ 6ರಿಂದ 12 ವರ್ಷದವರಿಗೆ ಲಸಿಕೆ ನೀಡಲು ಅನುಮತಿ ನೀಡಿದ್ದು, ರಾಜ್ಯದಲ್ಲೂ ತಕ್ಷಣ ಆರಂಭಿಸಲಾಗುವುದು. ವಿಶೇಷವಾಗಿ ಶಾಲೆಗಳಲ್ಲಿ ಲಸಿಕೆ ಹಾಕಲು ಹೆಚ್ಚಿನ ಗಮನ ಹರಿಸಲಾಗುವುದು.

ಲಸಿಕೆ ನೀಡಲು ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದ್ದು, ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಲಾಗುತ್ತಿದೆ. ವಿಶೇಷವಾಗಿ ಜಿನೊಮ್ ಪರೀಕ್ಷೆಗಳನ್ನು ಹೆಚ್ಚಿಸಿದ್ದು, ಬೆಂಗಳೂರು ನಗರದಲ್ಲಿ ನಾಲ್ಕು ಸಾವಿರ ರಾಜ್ಯದ ಇತರೆ ಭಾಗಗಳಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ನುಡಿದರು.

ಭಾಷೆಯ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರನಟ ಸುದೀಪ್ ಅವರ ಅಭಿಪ್ರಾಯ ಸಮರ್ಪಕವಾಗಿದೆ. ಮಾತೃಭಾಷೆ ನಮಗೆ ಸಾರ್ವಭೌಮ ಭಾಷೆಯಾಗಿದ್ದು, ಇದನ್ನು ಎಲ್ಲರೂ ಮನಗಾಣಬೇಕು. ಗೌರವ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version