ದಿನದ ಸುದ್ದಿ
ರಾಜ್ಯದಲ್ಲಿ ಮೇ ಅಂತ್ಯದೊಳಗೆ 60 ಲ್ಯಾಬ್
ಸುದ್ದಿದಿನ,ದಾವಣಗೆರೆ : ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ದಗೊಳ್ಳುವ ವಿಶ್ವಾಸವಿದೆ. ದಾವಣಗೆರೆಯ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‍ನಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆ ಆರಂಭಗೊಳ್ಳಲಿದ್ದು, ಇಂದು ಅದಕ್ಕೆ ಚಾಲನೆ ನೀಡುತ್ತಿರುವುದು ಸಂತಸದ ವಿಷಯ ಎಂದು ಶಿಕ್ಷಣ ಸಚಿವರಾದ ಡಾ. ಕೆ.ಸುಧಾಕರ್ ಹೇಳಿದರು.
ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ಜಗತ್ತನ್ನು ಕಣ್ಣಿಗೆ ಕಾಣದೊಂದು ವೈರಾಣು ನಡುಗಿಸುತ್ತಿದೆ. ವಿಶ್ವದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ ನಿಯಂತ್ರಣ ಮಾಡುತ್ತಾ ಇದೆ. ದೇಶದಲ್ಲಿ ಸುಮಾರು 60 ಸಾವಿರ ಪಾಸಿಟಿವ್ ಪ್ರಕರಣಗಳಿದ್ದು, ನಮ್ಮ ರಾಜ್ಯ 13 ನೇ ಸ್ಥಾನದಲ್ಲಿ ಇದೆ ಎಂದರು.
ಸಿ ಜಿ ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷೆ ಲ್ಯಾಬ್ ಕಾರ್ಯಾರಂಭಗೊಂಡಿದ್ದು ಭಾನುವಾರ ಆರ್‍ಟಿಪಿಸಿಆರ್ ಮಷೀನ್‍ಗಳನ್ನು ಅಳವಡಿಸಲು ತಿಳಿಸಿದ್ದೇನೆ. ಇನ್ನೊಂದು ಎರಡು ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸಿದ್ದಗೊಳ್ಳಲಿದ್ದು ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು ತಪ್ಪುತ್ತದೆ. ಖಾಸಗಿ ಲ್ಯಾಬ್‍ಗಳಿಗೆ ದರ ನಿಗದಿಗೊಳಿಸಿದ್ದು, ಸರ್ಕಾರದ ವತಿಯಿಂದಲೇ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪ್ರಾರಂಭದಲ್ಲಿ ರಾಜ್ಯದ ಕೇವಲ ಎರಡು ಲ್ಯಾಬ್‍ಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ದಿನಕ್ಕೆ 250 ರಿಂದ 300 ಟೆಸ್ಟ್ ಮಾತ್ರ ಮಾಡಲಿಕ್ಕೆ ಸಾಧ್ಯವಾಗುತ್ತಿತ್ತು. ಇದೀಗ ಸುಮಾರು 30 ಲ್ಯಾಬ್‍ಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೇ ಅಂತ್ಯದೊಳಗೆ 60 ಲ್ಯಾಬ್‍ಗಳು ಕಾರ್ಯ ನಿರ್ವಹಿಸಲಿದ್ದು ದಿನವೊಂದಕ್ಕೆ ಸುಮಾರು 5 ರಿಂದ 5,500 ಟೆಸ್ಟ್‍ಗಳು ಮಾಡಲು ಸಾಧ್ಯವಾಗಲಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243