ದಿನದ ಸುದ್ದಿ
ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಬಂದವರಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿವೆ : ಸಚಿವ ಭೈರತಿ ಬಸವರಾಜ್
ಸುದ್ದಿದಿನ, ದಾವಣಗೆರೆ:ಗುರುವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಸಚಿವರು ಸಂಸದರು, ಶಾಸಕರು ಸೇರಿದಂತೆ ಎಲ್ಲರ ಸಹಯೋಗದೊಂದಿಗೆ ತಾಯಿ ಮತ್ತು ಮಕ್ಕಳ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸುಮಾರು ರೂ.21 ಕೋಟಿ ಅನುದಾನದಲ್ಲಿ ಈ ಕಟ್ಟಡವನ್ನು ಮತ್ತು ವೈದ್ಯರು/ಶುಶ್ರೂಷಕರ ವಸತಿಗೃಹ ನಿರ್ಮಿಸುತ್ತಿದ್ದು, ಇನ್ನು 15 ತಿಂಗಳಲ್ಲಿ ಈ ಕಾಮಗಾರಿಗಳನ್ನು ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ದಾವಣಗೆರೆ ನಗರವನ್ನು ಹಸಿರು ನಗರವನ್ನಾಗಿ ಮಾಡಲು ಸುಮಾರು 6500 ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇಂದು ಸ್ಮಾರ್ಟ್‍ಸಿಟಿ ಯೋಜನೆಯಡಿ ರೂ.15 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಪೂಜೆ ನೆರವೇರಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಗೆ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಸಮರ್ಪಣೆ ಮಾಡುತ್ತಿದ್ದೇವೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕೋವಿಡ್‍ನಿಂದ ಸಂಭಿಸುತ್ತಿರುವ ಸಾವುಗಳನ್ನು ನಿಯಂತ್ರಿಸಲು ನಾವು ವಿಫಲರಾಗಿಲ್ಲ. ಅತ್ಯಂತ ಅಚ್ಚುಕಟ್ಟಾಗಿ ಮತ್ತು ಸಮರ್ಪಕವಾಗಿ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತಿದೆ. ಕೇಂದ್ರ ಸರ್ಕಾರವೂ ಸಹ ರಾಜ್ಯ ಕೈಗೊಂಡಿರುವ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಆದರೆ ಲಾಕ್‍ಡೌನ್ ಸಡಿಲಿಕೆ ನಂತರ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಬಂದವರಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಸಮಸ್ಯೆ ಉಂಟಾಗಿದ್ದು ಅದನ್ನು ಸಹ ಸಮರ್ಥವಾಗಿ ನಿರ್ವಹಣೆ ಮಾಡಲಾಗಿದೆ. ಉಸ್ತುವಾರಿ ಸಚಿವನಾದ ನಂತರ ದಾವಣಗೆರೆ ಜಿಲ್ಲೆಗೆ ಅನೇಕ ಬಾರಿ ಭೇಟಿ ನೀಡಿ ಕೋವಿಡ್ ನಿರ್ವಹಣೆ, ಇತರೆ ಚಟುವಟಿಕೆಗಳ ಕುರಿತು ಪರಿಶೀಲಿಸಿ, ಸೂಚನೆಗಳನ್ನು ನೀಡಿದ್ದೇನೆ. ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ 45 ಸಕ್ರಿಯ ಪ್ರಕರಣಗಳಿದ್ದು, ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243