ದಿನದ ಸುದ್ದಿ
ಕೊರೋನಾ ಹೆಚ್ಚಳ ಹಿನ್ನೆಲೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿಗೆ ಕೋವಿಡ್ ನೆಗೆಟಿವ್ ಕಡ್ಡಾಯ : ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ
ಸುದ್ದಿದಿನ,ಕಲಬುರಗಿ : ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯದಿಂದ ಜಿಲ್ಲೆಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಕಳೆದ 72 ಗಂಟೆಯಲ್ಲಿ ಪಡೆದ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ತೋರಿಸಿದರೆ ಮಾತ್ರ ಗಡಿಯಲ್ಲಿ ಪ್ರವೇಶ ನೀಡಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ದೇಶದ ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯ ಜನರ ಅರೋಗ್ಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ ಎಂದರು.
ಕೋವಿಡ್ ನೆಗೆಟಿವ್ ಪ್ರಮಾಣ ಇಲ್ಲದಿದ್ದಲ್ಲಿ ಜಿಲ್ಲೆಗೆ ಪ್ರವೇಶವಿಲ್ಲ ಎಂದಿರುವ ಜಿಲ್ಲಾಧಿಕಾರಿಗಳು ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ತಪಾಸಣೆಗೆ ಆಳಂದ ತಾಲೂಕಿನ ಹಿರೋಳಿ, ಖಜೂರಿ ಹಾಗೂ ನಿಂಬಾಳ ಮತ್ತು ಅಫಜಲಪೂರ ತಾಲೂಕಿನ ಬಳ್ಳೂರ್ಗಿ ಮತ್ತು ಮಾಶಾಳ ಗ್ರಾಮಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ | ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ರಾಜ್ಯ ಸರ್ಕಾರದ ನಿರ್ದೇಶನವಿದ್ದರೂ ಸಹ ಸಾರ್ವಜನಿಕರು ಈ ಸಂಖ್ಯೆಗೆ ಗಣನೆಗೆ ತೆಗೆದುಕೊಳ್ಳದೆ ಇದಕ್ಕೂ ಕಡಿಮೆ ಸಂಖ್ಯೆಯಲ್ಲಿ ಸೇರಿ ತಮ್ಮ ಕಾರ್ಯಕ್ರಮಗಳು ನೆರವೇರಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಉಳಿದಂತೆ ಕೋವಿಡ್ ಸೊಂಕು ನಿಯಂತ್ರಣಕ್ಕೆ ಎಂದಿನಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯವಾಗಿದ್ದು, ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಡಿ.ಸಿ ವಿ.ವಿ. ಜ್ಯೋತ್ಸ್ನಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243