ದಿನದ ಸುದ್ದಿ

ಕೋವಿಡ್ ಶವಗಳಿಗೆ ಮಿಡಿಯುವ ಕವಿ ಹೃದಯ..!

Published

on

  • ಪಂಜು ಗಂಗೊಳ್ಳಿ, ವ್ಯಂಗ್ಯಚಿತ್ರಕಾರ

ತ್ತರಪ್ರದೇಶ ಲಕ್ನೋದ 45 ವರ್ಷ ಪ್ರಾಯದ ವರ್ಷಾ ವರ್ಮಾ ಒಬ್ಬ ಕವಯಿತ್ರಿ. ಆದರೆ, ಇವರ ಕವಿ ಹೃದಯ ಇತರರ ನೋವು ನಲಿವುಗಳಿಗೆ ಸ್ಪಂಧಿಸಿ ಕವನಗಳನ್ನು ಬರೆದು ಸುಮ್ಮನಾಗುವಂತಹ ಸಾಮಾನ್ಯ ಹೃದಯವಲ್ಲ! ಇವರು ದೀಪಕ್ ಮಹಾಜನ್ ಎಂಬ 60 ವರ್ಷ ಪ್ರಾಯದ ಸರ್ಕಾರಿ ನೌಕರ ಮತ್ತು ಮಹಮ್ಮದ್ ಅಝರ್ ಹುಸೇನ್ ಎಂಬ 26 ವರ್ಷದ ಒಬ್ಬ ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಲಕ್ನೋ ನಗರದಲ್ಲಿ ಕೋವಿಡ್ ಸೋಂಕು ತಗಲಿ ಸಾಯುವ ಅನಾಥರಿಗೆ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ನೀಡುತ್ತಿದ್ದಾರೆ.

ನಿರ್ಗತಿಕರು ಮಾತ್ರವಲ್ಲ, ಸಾಕಷ್ಟು ಬಂಧು ಬಳಗವಿರುವವರೂ ಸೋಂಕು ತಗಲಿ ಸತ್ತರೆ ಅನಾಥರಂತೆ ಚಿತಾಗಾರ ಸೇರುವುದು ಸಾಮಾನ್ಯವಾಗುತ್ತಿರುವ ಕೋವಿಡ್ ನ ಈ ಬಿಕ್ಕಟ್ಟಿನ ದಿನಗಳಲ್ಲಿ ವರ್ಷಾ ವರ್ಮಾ ಮತ್ತು ಅವರ ಸಂಗಡಿಗರ ಈ ಕಾರ್ಯ ಮನಕಲಕುವಂತಹದ್ದು. ಮಾರ್ಚಿನಿಂದ ಈವರೆಗೂ ಇವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಆನೇಕ ಕೋವಿಡ್ ಶವಗಳ ಅಂತ್ಯಕ್ರಿಯೇ ನಡೆಸಿದ್ದಾರೆ.

ವಾಸ್ತವದಲ್ಲಿ, ವರ್ಷಾ ವರ್ಮಾ ಮತ್ತು ಅವರ ಸಂಗಡಿಗರು ಎರಡೂವರೆ ವರ್ಷಗಳ ಹಿಂದಿನಿಂದಲೇ ಅನಾಥ ಶವಗಳ ಅಂತ್ಯ ಸರ್ಕಾರ ನಡೆಸುವ ಕೆಲಸವನ್ನು ಶುರು ಮಾಡಿದ್ದರು. ಈ ಕೆಲಸಕ್ಕೆಂದೇ ಇವರು 2017 ರಲ್ಲಿ ‘ದಿವ್ಯ ಸೇವಾ ಫೌಂಡೇಷನ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಸಾಮಾನ್ಯವಾಗಿ ಪೋಲಿಸರು ಅನಾಥ ಶವಗಳನ್ನು ಬಟ್ಟೆಯಲ್ಲಿ ಸುತ್ತಿ ತೆರೆದ ಗಾಡಿಗಳಲ್ಲಿ ಹಾಕಿ ಚಿತಾಗಾರಕ್ಕೆ ಕೊಂಡೊಯ್ಯುತ್ತಾರೆ. ಆದರೆ, ವರ್ಮಾ ಈ ಅನಾಥ ಶವಗಳನ್ನು ಗೌರವಯುತವಾದ ಚಟ್ಟದ ಮೇಲಿರಿಸಿ, ಚಿಕ್ಕದೊಂದು ಬಸ್ಸಿನೊಳಗಿಟ್ಟು ಸಕಲ ಮರ್ಯಾದೆಗಳ ಮೂಲಕ ಅವುಗಳ ಅಂತ್ಯ ಕ್ರಿಯೆ ನಡೆಸುತ್ತಾರೆ. ಹೀಗೆ ಈವರೆಗೆ ಮೂವರೂ ಸೇರಿ 800 ಕ್ಕೂ ಹೆಚ್ಚಿನ ಅನಾಥರ ಶವಗಳಿಗೆ ಗೌರವಯುತವಾದ ಮುಕ್ತಿ ನೀಡಿದ್ದಾರೆ.

ವರ್ಷಾ ವರ್ಮಾರ ಪತಿ ರಾಕೇಶ್ ವರ್ಮಾ ಉತ್ತರಪ್ರದೇಶ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಒಬ್ಬ ಎಂಜಿನಿಯರ್. 14 ವರ್ಷದ ಮಗಳು ನಂದಿನಿ ವರ್ಮಾ. “ಈ ನತದೃಷ್ಟರು ಹೇಗೇಗೋ ಬದುಕಿ ತಮ್ಮ ಜೀವನ ಕಳೆದಿರುತ್ತಾರೆ.ಆದರೆ, ಅವರ ಬದುಕಿನ ಪಯಣದ ಕೊನೆಯನ್ನಾದರೂ ತುಸು ಗೌರಯುತವಾಗಿಸುವುದಕ್ಕೆ ನೆರವಾಗುವ ಮೂಲಕ ನನ್ನ ಮನಸ್ಸಿಗೇನೋ ಒಂದು ರೀತಿಯ ಸಮಾಧಾನ ಸಿಗುತ್ತದೆ. ಈ ಕೆಲಸದಿಂದ ನನಗೆ ಸಿಗುವ ಪ್ರತಿಫಲ ಇದೊಂದೇ” ಎನ್ನುತ್ತಾರೆ ವರ್ಷಾ. ತನ್ನ ತಾಯಿಯ ಕೆಲಸಗಳನ್ನು ನೋಡಿ ಬೆಳೆದ ನಂದಿನಿಯೂ ಮುಂದೆ ತಾನೂ ತಾಯಿಯಂತೆ ಸಾಮಾಜಿಕ ಕಾರ್ಯಕರ್ತೆಯಾಗುತ್ತೇನೆ ಅನ್ನುತ್ತಾಳೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version