ದಿನದ ಸುದ್ದಿ

ದಾವಣಗೆರೆ | ಕೊರೊನಾ ಪರಿಣಾಮಕಾರಿ ನಿಯಂತ್ರಣಕ್ಕೆ ವಾರ್ಡ್-ಬೂತ್ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ರಚಿಸಲು ಜಿಲ್ಲಾಧಿಕಾರಿ ಸೂಚನೆ

Published

on

ಸುದ್ದಿದಿನ,ದಾವಣಗೆರೆ : ಕೋವಿಡ್ 19 ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಅಲ್ಲಿನ ಸ್ಥಳೀಯ ನಾಗರೀಕರು, ಜನಪ್ರತಿನಿಧಿಗಳು, ವೈದ್ಯರು, ಪೊ0ಲೀಸರು, ವಕೀಲರು, ಅಧಿಕಾರಿಗಳು/ನೌಕರರು, ಎನ್‍ಜಿಓ ಮತ್ತು ಇತರೆ ವ್ಯಕ್ತಿಗಳನ್ನೊಳಗೊಂಡ ಟಾಸ್ಕ್‍ಫೋರ್ಸ್ ಸಮಿತಿಯನ್ನು ಜು.9 ರೊಳಗೆ ರಚಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ವೈದ್ಯಕೀಯ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮುಗಿದ ನಂತರ ಮಾತನಾಡಿದ ಅವರು ಸರ್ಕಾರದ ಸೂಚನೆಯಂತೆ ಕೋವಿಡ್‍ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಸ್ಥಳೀಯ ನಾಗರೀಕರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ವಾರ್ಡ್‍ಗಳು ಮತ್ತು ಬೂತ್ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿಯನ್ನು ರಚಿಸಿ ಸ್ಥಳೀಯವಾಗಿ ಕಾರ್ಯಪ್ರವೃತ್ತರಾಗಬೇಕು.

ಈ ಟಾಸ್ಕ್‍ಫೋರ್ಸ್ ಸಮಿತಿಗಳಲ್ಲಿ ಆಯಾ ವಾರ್ಡ್‍ಗಳು ಮತ್ತು ಬೂತ್ ಮಟ್ಟದಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು, ಪರಾಜಿತರಾದ ಅಭ್ಯರ್ಥಿಗಳು, ವೈದ್ಯರು, ಪೊಲೀಸರು, ಸರ್ಕಾರಿ ಅಧಿಕಾರಿಗಳು, ವಕೀಲರು, ಇಂಜಿನಿಯರುಗಳು, ಎನ್‍ಜಿಓ, ಇತರೆ ಜವಾಬ್ದಾರಿಯುತ ಮತ್ತು ಪ್ರಭಾವಿ ವ್ಯಕ್ತಿಗಳನ್ನೊಳಗೊಂಡ ಸಮಿತಿ ರಚಿಸಿ ಆಯಾ ಭಾಗದಲ್ಲಿ ಕೋವಿಡ್ ನಿಯಂತ್ರಣ, ಜಾಗೃತಿ ಮತ್ತು ಇತರೆ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 45 ವಾರ್ಡುಗಳು ಮತ್ತು 375 ಬೂತ್‍ಗಳಿದ್ದು ಇಲ್ಲಿ ಸಮಿತಿಗಳ ರಚನೆಯಾಗಬೇಕು. ಜೊತೆಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಸಹ ಇದೇ ರೀತಿಯ ಸಮಿತಿಗಳನ್ನು ರಚಿಸಿ ಕಾರ್ಯ ಪ್ರವೃತ್ತರಾಗಬೇಕು. ಜು.9 ಕ್ಕೆ ಪಾಲಿಕೆ, ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ರಚಿಸುವ ಕೆಲಸ ಮುಗಿಯಬೇಕು.

ಜು. 10 ಮತ್ತು 11 ರಂದು ಇವರಿಗೆ ತರಬೇತಿ ನೀಡುವ ಕೆಲಸ ಆಗಬೇಕು. ಜು.15 ರಿಂದ ಈ ಟಾಸ್ಕ್‍ಫೋರ್ಸ್ ಸಮಿತಿಗಳು ತಮ್ಮ ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಾರಂಭ ಮಾಡುವಂತಾಗಬೇಕೆಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಗ್ರಾ.ಪಂ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಿದ್ದು, ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರೀಕರೂ ತಮ್ಮ ತಮ್ಮ ಕಾಳಜಿ ವಹಿಸಬೇಕು. ಹಾಗೂ ತಮ್ಮ ಪ್ರದೇಶದ ಬಗ್ಗೆ ಜವಾಬ್ದಾರಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಈ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪ್ರತಿ 10 ವಾರ್ಡುಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು. ಈ ಸಮಿತಿಗಳು ಸ್ಥಳೀಯವಾಗಿ ಕೋವಿಡ್ ನಿಯಂತ್ರಣ ಮಾಡಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡು ಜಾಗೃತಿ ಮೂಡಿಸುವ, ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಎಸ್.ಪಿ ಹನುಮಂತರಾಯ, ಜಿ.ಪಂ. ಸಿಇಓ ಪದ್ಮ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version