ದಿನದ ಸುದ್ದಿ

ಕೋವಿಡ್ ವಿರುದ್ದ ಹೋರಾಡಲು ಕೈಜೋಡಿಸಲು ಯಡಿಯೂರಪ್ಪ ಮನವಿ

Published

on

ಸುದ್ದಿದಿನ,ದಾವಣಗೆರೆ : ಪ್ರಸ್ತುತ ಕೋವಿಡ್-19 ಸರ್ವವ್ಯಾಪಿ ಸಾಂಕ್ರಾಮಿಕ ರೋಗವು ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ಈ ಆರೋಗ್ಯ ವಿಕೋಪದ ನಿಯಂತ್ರಣಕ್ಕೆ ಸರ್ಕಾರವು ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಕ್ಷೇತ್ರಮಟ್ಟದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಕೂಡ ಕೈಜೋಡಿಸಿದ್ದಾರೆ.

ಹಿರಿಯ ನಾಗರಿಕರು, ಅಸಾಂಕ್ರಾಮಿಕ ಖಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಮತ್ತು ಬಾಣಂತಿಯರು, ಹೆಚ್‍ಐವಿ, ಕ್ಷಯ, ಕ್ಯಾನ್ಸರ್‍ನಿಂದ ಬಳಲುತ್ತಿರುವವರು ಹಾಗೂ ಡಯಾಲಿಸಿಸ್ ಸೇವೆಯನ್ನು ಪಡೆಯುತ್ತಿರುವವರು ಹೆಚ್ಚಾಗಿ ಕೋವಿಡ್-19 ಬಾಧೆಗೆ ತುತ್ತಾಗುವ ಸಾಧ್ಯತೆಯಿದೆ.

ಕೋವಿಡ್-19 ರೋಗ ನಿಯಂತ್ರಣದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕ್ರಮಗಳು ಕೆಳಕಂಡತಿವೆ

ಮಾಡಬೇಕಾದ ಕ್ರಮಗಳು

ಕೈಗಳನ್ನು ಸೋಪಿನಿಂದ ತೊಳೆಯುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಮುಖ ಮತ್ತು ಮೂಗು ಮುಚ್ಚುವಂತೆ ಮಾಸ್ಕ್ ಧರಿಸಬೇಕು, ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಕರವಸ್ತ್ರ/ಟಿಶ್ಯೂ ಪೇಪರ್‍ನಿಂದ ಮುಚ್ಚಿಕೊಳ್ಳುವುದು, ಇತರರರಿಂದ ಕನಿಷ್ಠ ಎರಡು ಮೀ/ಆರು ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಆರೋಗ್ಯ ಸೇತು ಆಪ್ ಡೌನ್‍ಲೋಡ್ ಮಾಡಿಕೊಂಡು ಕಾಳಕಾಲಕ್ಕೆ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಹಾಗೂ ಆಗಾಗ ಸ್ವಯಂ ಪರೀಕ್ಷೆ ಮಾಡಿಕೊಳ್ಳಬೇಕು.

ಮಾಡಬಾರದ ಕ್ರಮಗಳು

ನಿಮಗೆ ಜ್ಷರ ಮತ್ತು ಕೆಮ್ಮು ಕಂಡುಬಂದರೆ ಬೇರೆಯವರೊಡನೆ ನಿಕಟ ಸಂಪರ್ಕ ಹೊಂದುವುದು, ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಿಂದಾಗ್ಗೆ ಸ್ಪರ್ಶಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಹೆಚ್ಚು ಜನಸಂದಣಿಯಿರುವ ಪ್ರದೇಶಗಳು, ದೊಡ್ಡ ದೊಡ್ಡ ಸಭೆ ಹಾಗೂ ಸಮಾರಂಭಗಳಿಗೆ ಭೇಟಿ ನೀಡುವುದು, ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು ಮಾಡಬಾರದು.

ಹಿರಿಯ ನಾಗರಿಕರು ಮುನ್ನಚರಿಕಾ ಕ್ರಮಗಳನ್ನು ಅನುಸರಿಸಿ ಮನೆಯಲ್ಲಿಯೇ ಸುರಕ್ಷಿತವಾಗಿರಬೇಕು. ಕ್ಷಯ ಮತ್ತು ಹೆಚ್‍ಐವಿಯಿಂದ ಬಳಲುತ್ತಿರುವವರು ನಿಯಮಿತವಾಗಿ ಸರಿಯಾದ ಸಮಯದಲ್ಲಿ ಔಷಧಗಳನ್ನು ಸೇವಿಸಬೇಕು. ಗರ್ಭಿಣಿಯರು, ವೈದ್ಯರು ಸೂಚಿಸಿರುವ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಗುಳಿಗೆಗಳನ್ನು ಸೇವಿಸುವ ಮೂಲಕ ಆಹಾರ ಕ್ರಮಗಳನ್ನು ಅನುಸರಿಸಬೇಕು.

ಡಯಾಲಿಸಿಸ್ ಆರೈಕೆ ಪಡೆಯುತ್ತಿರುವವರು ಡಯಾಲಿಸಿಸ್ ಸೈಕಲ್‍ಗಳನ್ನು ತಪ್ಪಿಸಬೇಡಿ ಹಾಗೂ ವೈದ್ಯರು ಸೂಚಿಸಿದಂತೆ ನಿಗದಿತವಾಗಿ ಔಷಧಗಳನ್ನು ಸೇವಿಸಬೇಕು. ಜೊತೆಗೆ ಕ್ಯಾನ್ಸ್‍ರ್‍ನಿಂದ ಬಳಲುತ್ತಿರುವವರು ಹೆಚ್ಚಿನ ಮುಂಜಾಗ್ರತೆ ವಹಿಸಿ ಮನೆಯಲ್ಲಿಯೇ ಇರಬೇಕು. ಈ ಮೇಲ್ಕಂಡ ವರ್ಗದ ಜನರಿಗೆ ವಿಶೇಷ ಕಾಳಜಿಯ ಅವಶ್ಯಕತೆಯಿದ್ದು, ಕೋವಿಡ್-19 ಲಕ್ಷಣವಿರುವ ಸೋಂಕಿತರಿಂದ ದೂರವಿರುವುದು ಹಾಗೂ ಹೆಚ್ಚಿನ ಶುಚಿತ್ವದ ಅಗತ್ಯವಿದೆ.

ಜ್ವರ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ಆಪ್ತಮಿತ್ರ ಸಹಾಯವಾಣಿ 14410 ಗೆ ಕರೆ ಮಾಡಿ. ಈ ಮೂಲಕ ಕೋವಿಡ್-19 ರೋಗದ ವಿರುದ್ಧ ಹೋರಾಟದಲ್ಲಿ ನೀವು ಕೈಜೋಡಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version