ದಿನದ ಸುದ್ದಿ

ದಾವಣಗೆರೆ | ಕೋವಿಡ್ – 19 : ಕರ್ತವ್ಯಲೋಪವೆಸಗಿದ ಸಿಬ್ಬಂದಿಗಳ ಸಸ್ಪೆಂಡ್

Published

on

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಚೆಕ್‍ಪೋಸ್ಟ್‍ಗೆ ನಿಯೋಜಿಸಲಾಗಿದ್ದ ಸಹ ಶಿಕ್ಷಕ ಮತ್ತು ದ್ವಿ.ದ.ಸ ಇವರನ್ನು ಕರ್ತವ್ಯ ಲೋಪದ ಕಾರಣ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಮೇ 11 ರಂದು ನಿಲಂಬನೆಯಲ್ಲಿಟ್ಟು (ಸಸ್ಪೆಂಡ್) ಆದೇಶಿಸಿರುತ್ತಾರೆ.

ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಗಟ್ಟುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಾವಣಗೆರೆ ನಗರ ಪ್ರದೇಶಕ್ಕೆ ವಿದೇಶಗಳಿಂದ, ಹೊರರಾಜ್ಯಗಳಿಂದ ಹಾಗೂ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳನ್ನು ಮತ್ತು ಪ್ರಯಾಣಿಕರನ್ನು ತಪಾಸಣೆ ಮಾಡಲು ನಗರದಲ್ಲಿ ಚೆಕ್‍ಪೊಸ್ಟ್‍ಗಳನ್ನು ಸ್ಥಾಪಿಸಿ ಆದೇಶಿಸಲಾಗಿತ್ತು.

ಈ ಚೆಕ್‍ಪೊಸ್ಟ್ ನೋಡಲ್ ಅಧಿಕಾರಿಯಾಗಿ ಡಿಡಿಪಿಐ ಇವರನ್ನು ನೇಮಿಸಿದ್ದು ಇವರು ಮೇ 5 ಮತ್ತು 6 ರಂದು ಚೆಕ್‍ಪೊಸ್ಟ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋತಿವೀರಪ್ಪ ಪದವಿಪೂರ್ವ ಕಾಲೇಜಿನ ಸಹ ಶಿಕ್ಷಕ ನಾಗರಾಜ್ ಎಂ ಮತ್ತು ವಿಶ್ವಬಂಧು ಪ್ರೌಢಶಾಲೆಯ ದ್ವಿ.ದ.ಸ ವೆಂಕಟೇಶ್ ನಾಯ್ಕ ಇವರು ಕರ್ತವ್ಯಕ್ಕೆ ಗೈರು ಹಾಜರಾಗಿ ಕರ್ತವ್ಯ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದ ಹಿನ್ನೆಲೆಯನ್ನು ವಿಪತ್ತು ನಿರ್ವಹಣಾ ಕಾಯ್ದೆ 2005, ಐಪಿಸಿ ಕಲಂ 188, ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು ಕರ್ನಾಟಕ ನಾಗರೀಕರ ಸೇವಾ ನಡತೆ ನಿಯಮಗಳು 1966 ರನ್ವಯ ಕೋವಿಡ್ ಕರ್ತವ್ಯಲೋಪವೆಸಗಿದ ಇವರನ್ನು ಜಿಲ್ಲಾಧಿಕಾರಿಗಳು ನಿಲಂಬನೆಯಲ್ಲಿಟ್ಟು ಆದೇಶಿಸಿರುತ್ತಾರೆ.

ನಿಲಂಬನೆಯ ಅವಧಿಯಲ್ಲಿ ಈ ಸಿಬ್ಬಂದಿಗಳು ನಿಯಮಾನುಸಾರ ಜೀವನಾಂಶಕ್ಕೆ ಮಾತ್ರ ಅರ್ಹರಿರುತ್ತಾರೆ. ಮತ್ತು ಈ ಸಿಬ್ಬಂದಿಗಳು ಈ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲವೆಂದು ಅವರು ಆದೇಶಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version