ದಿನದ ಸುದ್ದಿ

ಕೋವಿಡ್-19 | ಪರಿಹಾರಕ್ಕೆ ಆಗ್ರಹಿಸಿ ದಾವಣಗೆರೆಯಲ್ಲಿ ಬಿಸಿಯೂಟ ತಯಾರಕರ ಪ್ರತಿಭಟನೆ

Published

on

ಸುದ್ದಿದಿನ ,ದಾವಣಗೆರೆ: ನಗರದಲ್ಲಿ ಬಿಸಿಯೂಟ ತಯಾರಕರ ಸಿಬ್ಬಂದಿಗೆ 3 ತಿಂಗಳ ವೇತನವನ್ನು ಲಾಕ್‌ಡೌನ್‌ ಪರಿಹಾರಕ್ಕೆ‌ ಕೊಡಲು ಒತ್ತಾಯಿಸಿ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷ ರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ ನೇತೃತ್ವದಲ್ಲಿ ಶುಕ್ರವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೊರೋನಾ ಲಾಕ್‌ಡೌನ್‌ ಕಾರಣ ಬಿಸಿಯೂಟ ತಯಾರಕರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, 3 ತಿಂಗಳ ವೇತನದ ಮೊತ್ತವನ್ನು ಪರಿಹಾರವಾಗಿ ನೀಡುವ ಮೂಲಕ ಬಿಸಿಯೂಟ ತಯಾರಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಮನವಿಮಾಡಿದರು.

ಬಿಸಿಯೂಟ ತಯಾರಕರು ಕನಿಷ್ಟ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿದ್ದು, ವೇತನ ಹೆಚ್ಚಿಸುವ ಸರಕಾರದ ಭರವಸೆ ಬಜೆಟ್‌ನಲ್ಲಿ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ. ಆದ್ದರಿಂದ ಅಸಂಘಟಿತ ವಲಯದ ಅನೇಕ ವರ್ಗಗಳಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಪರಿಹಾರ ನೀಡಿರುವಂತೆ ಬಿಸಿಯೂಟ ಸಿಬ್ಬಂದಿಗೆ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿ ವರ್ಷವೂ ಏಪ್ರಿಲ್‌, ಮೇ ತಿಂಗಳ ಬೇಸಿಗೆ ರಜೆಯ ಸಂದರ್ಭದಲ್ಲಿ ಬಿಸಿಯೂಟ ಸಿಬ್ಬಂದಿಗೆ ವೇತನ ಸಿಗುವುದಿಲ್ಲ. ಲಾಕ್ ಡೌನ್ ಪರಿಣಾಮ ಶಾಲೆಗಳು ಆರಂಭವಾಗುವುದು ತಡವಾಗುವುದರಿಂದ 3 ತಿಂಗಳ ವೇತನವನ್ನು ಪರಿಹಾರ ಧನವಾಗಿ ನೀಡಬೇಕು ಎಂದು ಆಗ್ರಹಿಸಿದರು.


ರಾಜ್ಯದಲ್ಲಿ ಅಕ್ಷ ರ ದಾಸೋಹದಡಿ 1.18 ಲಕ್ಷ ಮಂದಿ ಬಡ ಮಹಿಳೆಯರು 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ತಿಂಗಳಿಗೆ 2700 ರೂ, ಸಹಾಯಕ ಸಿಬ್ಬಂದಿಗೆ ತಿಂಗಳ 2600 ರೂ. ವೇತನವಿದೆ. ಇದರಲ್ಲಿ ಕೇಂದ್ರ ಸರ್ಕಾರವು ಕೇವಲ 600 ರೂಗಳನ್ನು ನೀಡುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ.


ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್‌.ಕೆ.ರಾಮಚಂದ್ರಪ್ಪ, ಮುಖಂಡರಾದ ಆವರಗೆರೆ ಚಂದ್ರು, ಜ್ಯೋತಿಲಕ್ಷ್ಮೀ, ರುದ್ರಮ್ಮ ಬೆಳಲಗೆರೆ, ಚನ್ನಮ್ಮ, ಸರೋಜಾ, ರಾಮಣ್ಣ, ರಂಗನಾಥ, ಹನುಮಕ್ಕ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version