ದಿನದ ಸುದ್ದಿ
ಕೋವಿಡ್ ಕಾರ್ಯಗಳಿಗೆ 2.74 ಕೋಟಿ ರೂ. ಬಿಡುಗಡೆ : ಸಚಿವ ಆರ್. ಆಶೋಕ್
ಸುದ್ದಿದಿನ,ಚಾಮರಾಜನಗರ: ಕೋವಿಡ್-19 ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕೆಲಸ ಕಾರ್ಯಗಳಿಗಾಗಿ ಚಾಮರಾಜನಗರ ಜಿಲ್ಲೆಗೆ ಕಂದಾಯ ಇಲಾಖೆಯಡಿ 2.74 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರಾದ ಆರ್. ಆಶೋಕ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು ವಲಸೆ ಕಾರ್ಮಿಕರು, ಕ್ವಾರಂಟೈನ್ ಕೇಂದ್ರ ನಿರ್ವಹಣೆ ಸೇರಿದಂತೆ ಕೋವಿಡ್-19ರ ತಡೆ ಕಾರ್ಯಗಳಿಗಾಗಿ ಆರ್ಥಿಕ ನೆರವು ನೀಡಲಾಗಿದೆ. ಕೋವಿಡ್-19 ಪ್ರಯೋಗಾಲಯಕ್ಕಾಗಿ 1.79 ಕೋಟಿ ರೂ. ಹಣ ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 3.52 ಕೋಟಿ ರೂ. ಹಣ ಇದೆ ಎಂದರು.
ಜಿಲ್ಲೆಯಲ್ಲಿ ಬರ ಪರಿಹಾರ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಗಾಗಿ 12.28 ಕೋಟಿ ರೂ. ಜಿಲ್ಲಾಧಿಕಾರಿಯವರ ಖಾತೆಯಲ್ಲಿದೆ. ಜಿಲ್ಲೆಗೆ ಹೊಸದಾಗಿ ಪೆÇಲೀಸ್ ತರಬೇತಿ ಶಾಲೆ ಸ್ಥಾಪನೆ ಮಾಡಲು ಚಾಮರಾಜನಗರ ತಾಲೂಕಿನ ಎಡಪುರ ಗ್ರಾಮದಲ್ಲಿ 35 ಎಕರೆ ಜಮೀನನ್ನು ನೀಡಿದ್ದೇವೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಲು ಎದುರಾಗಿರುವ ಸರ್ವರ್ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದರು.
ಇದುವರೆಗೂ ಕೋವಿಡ್-19ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪೆÇಲೀಸ್ ಇಲಾಖೆಗೆ 10 ಕೋಟಿ ರೂ., ಆರೋಗ್ಯ ಇಲಾಖೆಗೆ 70 ಕೋಟಿ ರೂ., ಎಲ್ಲ ಜಿಲ್ಲಾಧಿಕಾರಿಗಳಿಗೆ 152 ಕೋಟಿ ರೂ., ಕಾರಾಗೃಹಗಳಿಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕಳೆದ ಬಾರಿ ಪ್ರವಾಹ ಬಂದ ಸಂದರ್ಭದಲ್ಲಿ 6.108 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿದೆ. ಬೆಳೆ ಹಾನಿ ಪರಿಹಾರಕ್ಕೆ 1,200 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದರಲ್ಲಿ 6.45 ಲಕ್ಷ ರೈತರಿಗೆ ಪರಿಹಾರ ಒದಗಿಸಲಾಗಿದೆ ಎಂದರು.
ನಿಸರ್ಗ ಚಂಡಮಾರುತ ಅರಬ್ಬಿ ಸಮುದ್ರದ ದಕ್ಷಿಣ ನೈರುತ್ಯದ ದಿಕ್ಕಿನಲ್ಲಿ 115 ಕಿ.ಮೀ ಅಂತರದಲ್ಲಿ ಮಹಾರಾಷ್ಟ್ರದ ಹತ್ತಿರ ಕೇಂದ್ರೀಕೃತವಾಗಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮಲೆನಾಡಿನಲ್ಲಿ ಬಹುತೇಕ ಹಗುರದಿಂದ ಸಾಧಾರಣ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಯಲ್ಲಿ ಗಾಳಿಯ ವೇಗ 50-60 ಕಿ.ಮೀ ಇರಲಿದೆ. ಸಮುದ್ರದ ಅಲೆಗಳು 2ರಿಂದ 4 ಮೀಟರ್ ಏರಬಹುದು. ಆದ್ದರಿಂದ ಮೀನುಗಾರರು ನೀರಿಗೆ ಇಳಿಯಬಾರದೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಶಾಸಕರಾದ ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243