ಲೈಫ್ ಸ್ಟೈಲ್

ಕಾಡಿನ ರಾಣಿ ‘ಗುಲಗಂಜಿ’ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಹತ್ವದ ಮಾಹಿತಿ..!

Published

on

  • ಸೌಮ್ಯ ಅಶೋಕ್, ಬೆಂಗಳೂರು

ಗುಲಗಂಜಿ ಎಂದರೆ, ಎಲ್ಲರಿಗೂ ನೆನಪಾಗುವುದು ಕೆಂಪು ಮೈ ಹಾಗೂ ಕಪ್ಪು ತುದಿಯುಳ್ಳ ಬೀಜ ಹಾಗೂ ಹಿಂದೇ ಹೇಳುತ್ತಿದ್ದ ಮಾತು “ಗುಲಗಂಜಿ ಪೂರ್ಣ ಕೆಂಪಾದರೆ ಪ್ರಳಯವಾಗುತ್ತದೆ” ಎಂಬುದು. ಇದನ್ನು “ಕಾಡಿನ ರಾಣಿ” ಎಂದು ಕೂಡ ಕರೆಯುತ್ತಾರೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿವಿಧ ಬಣ್ಣದ ಗುಲಗಂಜಿ ಇರುವುದು ಹಾಗೂ ಆಯುರ್ವೇದದಲ್ಲಿ ಕೂಡ ಉಪಯೋಗಿಸುತ್ತಾರೆ ಎಂಬುದು ಸಹ ಹಲವರಿಗೆ ತಿಳಿದಿಲ್ಲ.

ಇದು ಎಷ್ಟು ಉಪಯೋಗ ಇದೆಯೋ ಅಷ್ಟೇ ಅಪಾಯಕಾರಿಯು ಹೌದು. ಇಂಗ್ಲೀಷ್‌ನಲ್ಲಿ ಇದನ್ನು ಕ್ರ್ಯಾಬ್ಸ್ ಐ, ಇಂಡಿಯನ್ ಲಿಕರಿಸ್, ಜೆಕ್ವೈರಿಟಿ ಎಂದು ಕರೆಯುತ್ತಾರೆ. ಇದು ಲೆಗ್ಯೂಮಿನೋಸೀ ಕುಟುಂಬ, ಪ್ಯಾಪಿಲಿಯೋನೇಸೀ ಎಂಬ ಉಪಕುಟುಂಬಕ್ಕೆ ಸೇರಿದ ಒಂದು ಬಳ್ಳಿ. ಇದನ್ನು ಮೊದಲು ಬಂಗಾರದ ಅಂಗಡಿಗಳಲ್ಲಿ ಬಂಗಾರವನ್ನು ತೂಕ ಮಾಡಲು ಬಳಸುತ್ತಿದ್ದರು. ಗುಲಗಂಜಿ ತುಂಬಾ ಮನಮೋಹಕ ಬಣ್ಣವುಳ್ಳದ್ದಾಗಿದ್ದು, ಇದರ ಗಾತ್ರ ತೊಗರಿ/ಅಲಸಂದೆ ಕಾಳಿನಷ್ಟಾಗಿರುತ್ತದೆ.

ಗುಲಗಂಜಿಯ ಬಗ್ಗೆ ಒಂದು ಗಾದೆ ಮಾತು ಕೂಡ ಉಂಟು “ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ” ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟರೆ ಏನಾಗಬಹುದು ಎನ್ನುವುದಕ್ಕೆ ಈ ಗಾದೆಯನ್ನು ಬಳಸುತ್ತಾರೆ. ಈಗ ಗುಲಗಂಜಿ ಎಲ್ಲಿ ಬೆಳೆಯುತ್ತದೆ, ವಿವಿಧ ಬಣ್ಣಗಳು , ಉಪಯೋಗ ಮತ್ತು ಅಪಾಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಯೋಣ.

ಗುಲಗಂಜಿಯ ವ್ಯಾಪ್ತಿ ಹಾಗೂ ವಿಧಗಳು

ಭಾರತಾದ್ಯಂತ ಗುಲಗಂಜಿಯ ವ್ಯಾಪ್ತಿ ಉಂಟು, ಬಯಲು ಸೀಮೆಗಳಲ್ಲಿ ಇದು ಹೇರಳವಾಗಿದೆ. ಹಿಮಾಲಯದಲ್ಲಿ 1,100ಮೀ.ಎತ್ತರದ ಪ್ರದೇಶದಲ್ಲಿಯೂ ಚನ್ನಾಗಿ ಬೆಳೆಯುತ್ತದೆ. ಇತರ ಆಸರೆ ಸಸ್ಯಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾದ ಇದು ಸುಮಾರು 8-10 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು, ಕೆಂಪು ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಹೂವುಗಳು ಗಾತ್ರದಲ್ಲಿ ಚಿಕ್ಕವು. ಸಾಮಾನ್ಯವಾಗಿ ಅನೇಕ ಫಲಗಳು ಒಂದು ಗೊಂಚಲಿನಲ್ಲಿರುತ್ತವೆ. ಬಲಿತು ಒಣಗಿದ ಅನಂತರ ಕಾಯಿಗಳು ಬಿರಿಯುವುದರಿಂದ ಒಳಗಿನ ಬೀಜಗಳು ಕಾಣಿಸುತ್ತದೆ.

ಗುಲಗಂಜಿಯ ಬೀಜಗಳು 4-5 ಬಣ್ಣಗಳಲ್ಲಿ ಲಭ್ಯವಿದೆ ಕೆಂಪು, ಬಿಳಿ, ನೀಲಿ, ಹಸಿರು ಹಾಗೂ ಕಪ್ಪು. ಹಸಿರು ಹಾಗು ಕಪ್ಪು ಗುಲಗಂಜಿಗಳು ಸಿಗುವುದು ತುಂಬ ವಿರಳ.

ಉಪಯೋಗಗಳು

  1. ಗುಲಗಂಜಿಯನ್ನು ಬಂಗಾರದ ಅಂಗಡಿಯಲ್ಲಿ ಹಾರಗಳು ಮತ್ತು ಜಪಮಾಲೆಗಳನ್ನು ತಯಾರಿಸಲು ಹಾಗು ಮೊದಲು ಚಿನ್ನವನ್ನು ತೂಕ ಮಾಡಲು (ತೂಕದ ಯಂತ್ರ ಬರುವ ಮೊದಲು) ಬಳಸುತ್ತಿದ್ದರು.
  2. ಗುಲಗಂಜಿಯ ಬೇರನ್ನು ಮತ್ತು ಬೀಜವನ್ನು ಚೂರ್ಣ ಮಾಡಿಕೊಂಡು, ಎಮ್ಮೆ ಹಾಲಿಗೆ ಹಾಕಿ ಕಲಸಿ ಮೊಸರು ಮಾಡಿ ಬೆಣ್ಣೆ ತೆಗೆದು ನಿತ್ಯವು ಒಳಕಿವಿಗೆ ಲೇಪಿಸುವುದರಿಂದ ಕಿವಿಯ ತೊಂದರೆ ವಾಸಿಯಾಗುತ್ತದೆ.
  3. ಗುಲಗಂಜಿಯ ಬೇರನ್ನು ಬಾಯಿಯಲ್ಲಿ ಜಗಿದು ರಸವಿಟ್ಟು ಕೊಳ್ಳುವುದರಿಂದ, ಹುಳುಕು ಹಲ್ಲಿನ ತೊಂದರೆ ನಿವಾರಣೆಯಾಗುತ್ತದೆ.
  4. ಗುಲಗಂಜಿ ಎಲೆಯ ರಸ ಅಥವಾ ಬೇರನ್ನು ಅರೆದು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಹಾಗೆ ಗಂಟಲು ನೋವು ಮತ್ತು ಒಣಕೆಮ್ಮು ಕಡಿಮೆಯಾಗುತ್ತದೆ.
  5. ಗುಲಗಂಜಿ ಎಲೆಯ ರಸವನ್ನು, ಚರ್ಮದ ಮೇಲಿನ ಕಲೆಗಳಿರುವ ಕಡೆ ಲೇಪಿಸುವುದರಿಂದ ಕಲೆಗಳ ನಿವಾರಣೆಯಾಗುತ್ತದೆ.
  6. ನಾಯಿ ಕಡಿದವರಿಗೆ ಸೊಪ್ಪನ್ನು ಅರೆದು ಎಳ್ಳೆಣೆಯೊಡನೆ ಕುಡಿಸುತ್ತಾರೆ.
  7. ತಲೆ,ಹುಬ್ಬು,ಮೀಸೆಯ ಕೂದಲು ಉದುರುತ್ತಿದ್ದರೆ, ಗುಲಗಂಜಿಯ ಬೇರನ್ನು ನೀರಿನಲ್ಲಿ ತೇದು ಕೂದಲು ಉದುರಿದ ಕಡೆ ಮಂದವಾಗಿ ಲೇಪಿಸುವುದರಿಂದ ಕ್ರಮೇಣ ಕೂದಲು ಬೆಳೆಯುತ್ತದೆ.
  8. ಕಾಲು, ಸೊಂಟ ಮತ್ತು ಯಾವುದೇ ಗಂಟು ನೋವು ಇದ್ದರೆ, ಗುಲಗಂಜಿಯ ಬೀಜದ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಹಚ್ಚುವುದರಿಂದ ನೋವು ಗಂಟು ಕಡಿಮೆಯಾಗುತ್ತದೆ.
  9. ಬಿಳಿ ಗುಲಗಂಜಿ ಬೇರಿನ ಪುಡಿಯನ್ನು ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ.
  10. ಗುಲಗಂಜಿಯ ಎಲೆ ತುಂಬಾ ಸಿಹಿ ಇರುತ್ತದೆ. ಅದರೇ ಗುಲಗಂಜಿಯು ಉಷ್ಣಕಾರಕ, ಇದನ್ನು ಗೊಗ್ಗರು ಧ್ವನಿಯನ್ನು ಸರಿಪಡಿಸಿಕೊಳ್ಳಲು ಬಳಸುತ್ತಾರೆ.
  11. ಅತಿ ಮಧುರ ಎಂಬ ಸಸ್ಯದ ಬೇರಿನಲ್ಲಿರುವ ಲಿಕರಿಸ್ ಎಂಬ ವಸ್ತುವಿನ ಮುಖ್ಯ ಸತ್ತ್ವವಾದ ಗ್ಲೈಸಿರೈಸಿನ್ ಎಂಬುದು ಗುಲಗಂಜಿಯ ಬೇರು ಹಾಗೂ ಎಲೆಗಳಿಂದ ತಯಾರಿಸಿದ ಕಷಾಯವನ್ನು ನೆಗಡಿ,ಕೆಮ್ಮು ಮತ್ತು ಹೊಟ್ಟೆ ನುಲಿತಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ.
  12. ಬೇಯಿಸಿದ ಗುಲಗಂಜಿ ಈಜಿಪ್ಟಿನಲ್ಲಿ ಆಹಾರವಾಗಿ ಬಳಸಲ್ಪಡುತ್ತದೆ.

ಸೂಚನೆ

ನಾವು ಗುಲಗಂಜಿಯ ಉಪಯೋಗ ತಿಳಿದ ಕೂಡಲೆ ನಾವೇ ಖುದ್ದಾಗಿ ಅದನ್ನು ಬಳಸಬಾರದು, ಅದನ್ನು ಸರಿಯಾದ ವೈದ್ಯರ ಸಲಹೆ ಪಡೆದು ನಂತರ ಅದನ್ನು ಉಪಯೋಗ ಮಾಡುವುದು ಉತ್ತಮ. ವೈದ್ಯರಿಗೆ ಅದರ ಸರಿಯಾದ ಪ್ರಮಾಣ ತಿಳಿದಿರುತ್ತದೆ.

ಅಪಾಯಗಳು

ಈ ಗುಲಗಂಜಿಯು ಎಷ್ಟು ಉಪಯೋಗವೋ ಅಷ್ಟೇ ಅಪಾಯಕಾರಿಯು ಹೌದು. ಇದು ಮನುಷ್ಯ ಹಾಗೂ ಪ್ರಾಣಿಗಳಿಗೆ ಅಪಾಯಕಾರಿ.

ಗುಲಗಂಜಿಯ ಬೀಜಗಳನ್ನು ‘ ಏಬ್ರಿನ್’ ಎಂಬ ಟಾಕ್ಯಾಲ್ಬ್ಯುಮಿನ್ ಇದೆ. ಇದೊಂದು ಕಟು ವಿಷ. ಈ ವಿಷ ಕಣ್ಣಿನ ರೆಪ್ಪೆಗಳ ಒಳಭಾಗಕ್ಕೆ ಲೇಪಿಸಿದರೆ ರಕ್ತಕ್ಕೆ ಏಬ್ರಿನ್ ಸೇರುವುದರಿಂದ ಪ್ರಾಣಹಾನಿಯಾಗುತ್ತದೆ. ಆದರೆ ಬಾಯಿ,ಅನ್ನನಾಳ ಮತ್ತು ಹೊಟ್ಟೆಯಲ್ಲಿ ಏಬ್ರಿನ್ ಯಾವ ದುಷ್ಪರಿಣಾಮವನ್ನು ಮಾಡುವುದಿಲ್ಲ.

ಗುಲಗಂಜಿ ಸಸ್ಯದ ಬೇರು, ಕಾಂಡ, ಎಲೆ ಎಲ್ಲವೂ ಉಪಯೋಗಕಾರಿ, ಅದರೇ ಬೀಜ ಮಾತ್ರ ನಾಗರಹಾವಿನ ವಿಷಕ್ಕಿಂತಲು ಅಪಾಯ.

ಕಿವಿಮಾತು

  • ಇಂದಿನ ದಿನಗಳಲ್ಲಿ ನಗರದ ಎಷ್ಟೋ ಜನಗಳಿಗೆ, ಗುಲಗಂಜಿ ಎಂದರೆ ಏನು ಎಂಬುದು ಗೊತ್ತಿಲ್ಲ ಹಾಗೂ ನೋಡಿಯೂ ಇರುವುದಿಲ್ಲ.
  • ರೈತರು ಇತ್ತೀಚಿನ ದಿನಗಳಲ್ಲಿ ಇದನ್ನು ತಮ್ಮ ತಮ್ಮ ಹೊಲದಲ್ಲಿ ಬೆಳೆಯನ್ನಾಗಿ . ಬೆಳೆದು ಒಳ್ಳೆಯ ಹಣ ಕೂಡ ಸಂಪಾದಿಸುತ್ತಿದಾರೆ. ಈ ಬಳ್ಳಿಯ ಆಯಸ್ಸು 50 ವರ್ಷ.
  • ಇದನ್ನು ನೀವು ಆರೋಗ್ಯ ದೃಷ್ಟಿಯಿಂದ ಬಳಸದಿದ್ದರೂ, ಸುಂದರವಾಗಿ ಕಾಣಿಸುತ್ತದೆ ಎಂದಾದರೂ ಹೊರಗೆ ಸಿಕ್ಕಾಗ ಶೇಖರಿಸಿಟ್ರಿಟುಕೊಳ್ಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version