ದಿನದ ಸುದ್ದಿ

ಮಂಡ್ಯ : ಬೆಳೆ ಸಮೀಕ್ಷೆ ಕಾರ್ಯ ಆರಂಭ

Published

on

ಸುದ್ದಿದಿನ, ಮಂಡ್ಯ : ಸರ್ಕಾರದ ನಿರ್ದೇಶನದಂತೆ ಮಂಡ್ಯ ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳಲ್ಲಿ ಮುಂಗಾರು ಬೆಳೆ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಸಮೀಕ್ಷೆಗೆ ಬರುವ ಸಮೀಕ್ಷೆದಾರರು ಹಾಗೂ ಅಧಿಕಾರಿಗಳಿಗೆ ರೈತರು ಸಹಕರಿಸುವ ಮೂಲಕ ರೈತಪರ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಮನವಿ ಮಾಡಿದ್ದಾರೆ.

ಬೆಳೆ ಸಮೀಕ್ಷೆಯು ರೈತಪರ ಯೋಜನೆಯಾಗಿದ್ದು, ರೈತರು ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಸರ್ಕಾರದ ದಾಖಲೆಯಲ್ಲಿ ನಿಖರವಾಗಿ ದಾಖಲಿಸುವುದರಿಂದ ಸರ್ಕಾರಕ್ಕೆ ಖಚಿತವಾಗಿ ಯಾವ ಬೆಳೆ ಎಷ್ಟು ವಿಸ್ತೀರ್ಣದಲ್ಲಿ ಬೆಳೆದಿದೆ ಎಂಬುದನ್ನು ತಿಳಿಯಲು ಅನುಕೂಲವಾಗುತ್ತದೆ. ಯಾವುದೇ ಪ್ರದೇಶದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದಲ್ಲಿ ಯಾವ ಪ್ರದೇಶದಲ್ಲಿ ಯಾವ ಬೆಳೆ ಎಷ್ಟು ನಷ್ಟವಾಗಿದೆ ಎಂದು ಅಂದಾಜಿಸಬಹುದಾಗಿದೆ. ಅಲ್ಲದೇ ಯಾವ ಬೆಳೆಗಳಿಗೆ ಬೆಂಬಲಿತ ಬೆಲೆ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಗ್ರಾಮಗಳಲ್ಲಿ ಲಭ್ಯವಿರುವ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇರುವ ಯುವಕರನ್ನು ( ಖಾಸಗಿ ನಿವಾಸಿಗಳು) ಗುರುತಿಸಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ತೊಡಗಿಸಿಕೊಂಡಿದ್ದು, ಮಂಡ್ಯ ಜಿಲ್ಲೆ ಎಲ್ಲಾ ಎಳು ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವು ಸೆಪ್ಟೆಂಬರ್ 28 ರಂದು ಆರಂಭಗೊಂಡಿದೆ. ಬೆಳೆ ಸಮೀಕ್ಷೆಗೆ 1281 ಖಾಸಗಿ ನಿವಾಸಿಗಳು ಬಳಸಿಕೊಳ್ಳಲಾಗುತ್ತಿದ್ದು, ಇವರುಗಳಿಗೆ ಈಗಾಗಗಲೇ ಎರಡು ಸುತ್ತು ತರಬೇತಿಯನ್ನು ನುರಿತ ತರಬೇತುದಾರರಿಂದ ನೀಡಲಾಗಿದೆ. ಸಮೀಕ್ಷೆಯು ಪ್ರತ್ಯೇಕಾ ಮೊಬೈಲ್ ಆ್ಯಪ್ ಮೂಲಕ ಮಾಡಲಾಗುತ್ತಿದ್ದು, ಇರದ ಬಳಕೆ ಕುರಿತು ಸಹ ಖಾಸಗಿ ನಿವಾಸಿಗಳಿಗೆ ತರಬೇತಿ ನೀಡಲಾಗಿದೆ.

ಬೆಳೆ ಸಮೀಕ್ಷೆಯನ್ನು ಮಂಡ್ಯ ಜಿಲ್ಲೆ 1485 ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, 16,95,821 ಪ್ಲಾಟ್‍ಗಳನ್ನು ಗುರು ಗುರುತಿಸಲಾಗಿದೆ. ಪ್ರತಿ ಪ್ಲಾಟಿನ ಬೆಳೆ ಸಂಗ್ರಹಣೆಗೆ ರೂ 10 ಗೌರವಧನವನ್ನು ನೀಡಲಾಗುತ್ತಿದ್ದು, ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಳ್ಳಲು ಆಸಕ್ತಿ ಇರುವ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇರುವ ಯುವಕರು ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಬಹುದು.

ಬೆಳೆ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಖಾಸಗಿ ನಿವಾಸಿಗಳ ಮೊಬೈಲ್ ಹಾಗೂ ಆಧಾರ್ ಸಂಖ್ಯೆಯನ್ನು ಪಡೆಯಲಾಗಿದ್ದು, ಸಮೀಕ್ಷೆ ವೇಳೆ ಸಹಕಾರಿಯಾಗಲು ಅವರುಗಳಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. 80 ಗ್ರಾಮ ಸಹಾಯಕರು ಸಮೀಕ್ಷೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಮೀಕ್ಷೆಯ ಮೇಲ್ವಿಚಾರಣೆಯನ್ನು ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಸಮೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಪರಿಣಾಮಕಾರಿಯಾಗಿ ಮಾಡಲು ಪ್ರತಿ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version