ದಿನದ ಸುದ್ದಿ
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ತಾಯಂದಿರಿಗೆ ಆರ್ಥಿಕ ನೆರವು : ಸಚಿವ ಸಿ.ಟಿ ರವಿ
ಸುದ್ದಿದಿನ,ಚಿಕ್ಕಮಗಳೂರು: ತಾಯಂದಿರ ಮತ್ತು ಮಕ್ಕಳ ಪೌಷ್ಠಿಕಾಂಶ ಮತ್ತು ಆರೋಗ್ಯ ಸುಧಾರಣೆಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಗರ್ಭಿಣಿ ತಾಯಂದಿರಿಗೆ ಅವರುಗಳ ಬ್ಯಾಂಕ್ ಖಾತೆಗೆ ನೇರವಾಗಿ ರೂ 5 ಸಾವಿರ ನೆರವು ನೀಡಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮ ಅಂಗವಾಗಿ ಜಾಗೃತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ 2022 ರವೇಳೆಗೆ ಅಪೌಷ್ಠಿಕತೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಪಣ ತೊಟ್ಟು ಪೋಷಣ್ ಅಭಿಯಾನವನ್ನು ಆರಂಭಿಸಲಾಗಿದ್ದು ಈ ಯೋಜನೆಯು ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳ ರಕ್ತಹೀನತೆ, ಮಹಿಳೆಯರು ಮತ್ತು ಕಿಶೋರಿಯರಿಗೆ ರಕ್ತಹೀನತೆ ಕಡಿಮೆ ಮಾಡುವುದು, ಕಡಿಮೆ ತೂಕದ ಮಕ್ಕಳ ಜನನವನ್ನು ಕಡಿಮೆಗೊಳಿಸುವುದು ಇದರ ಉದ್ದೇಶವಾಗಿದೆ ಎಂದರು.
ಪೋಷಣ್ ಅಭಿಯಾನ ಅನುಷ್ಠಾನದ ಬಗ್ಗೆ ನಿಖರವಾದ ಪಾರದರ್ಶಕ, ತ್ವರಿತ ಮಾಹಿತಿ ಕ್ರೂಢೀಕರಣಕ್ಕಾಗಿ ಸಿ.ಎ.ಎಸ್ (ಕಾಮನ್ ಆಪ್ಲಿಕೇಶನ್ ಸಾಫ್ಟ್‌ವೇರ್) ರೂಪಿಸಿದ್ದು, ಮಾಹಿತಿ ಸಂಗ್ರಹಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್, ಪವರ್ ಬ್ಯಾಂಕ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.
ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಪೌಷ್ಠಿಕ ಪುನಶ್ಚೇತನ ಕೇಂದ್ರಗಳ ಮೂಲಕ ಸೂಕ್ತ ಚಿಕಿತ್ಸೆ, ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಜೊತೆಗೆ ನರೇಗಾ ಯೋಜನೆಯಡಿ ಕೈತೋಟ ನಿರ್ಮಾಣಕ್ಕೆ ರೂ2.400 ಸಹಾಯಧನ ನೀಡಲಾಗುವುದು ಎಂದ ಅವರು ಪೌಷ್ಠಿಕ ಆಹಾರದ ಬಗ್ಗೆ ಶಾಲಾ ಮಕ್ಕಳಿಗೆ ವಿವಿಧ ಸ್ವರ್ಧೆಗಳನ್ನು ಏರ್ಪಡಿಸುವುದರೊಂದಿಗೆ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ವಿಶೇಷ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳ ಮತ್ತು ಗರ್ಭಿಣಿಯರ ಅಪೌಷ್ಠಿಕತೆಯನ್ನು ನಿಖರವಾಗಿ ಅಳೆದು ಸೂಕ್ತ ಚಿಕಿತ್ಸೆ ಹಾಗೂ ಪೌಷ್ಠಿಕ ಆಹಾರ ನೀಡುವ ಸಲುವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಇನ್ಪೆಂಟೊ ಮೀಟರ್, ಸ್ಟೀಡಿಯೊ ಮೀಟರ್, ಡಿಜಿಟಲ್ ವೈಯಿಂಗ್ ಸ್ಕೇಲ್, ಸಾಲ್ಟರ್ ಸ್ಕೇಲ್‌ಗಳನ್ನು ವಿತರಿಸಲಾಗಿದೆ. ಪೋಷಣ್ ಅಭಿಯಾನದ ಮೂಲಕ ಮಗುವಿನ ಮೊದಲ 1000ದಿನಗಳ ಆರೈಕೆ ಬಗ್ಗೆ ಒತ್ತು ನೀಡುವುದು ಮಕ್ಕಳು, ಕಿಶೋರಿ, ಗರ್ಭಿಣಿ, ಬಾಣಂತಿಯರ ರಕ್ತಹೀನತೆ, ಅತಿಸಾರ ಭೇದಿ ಹಾಗೂ ನೈರ್ಮಲ್ಯದ ಕುರಿತು ಅರಿವು ಮೂಡಿಸಲಾಗುತ್ತಿದೆ. ದೇಶದಲ್ಲಿ ಮಕ್ಕಳು ಸಮತೋಲನದ ಪೌಷ್ಠಿಕ ಆಹಾರ ಸೇವನೆಯ ಮೂಲಕ ಸದೃಢ ಆರೋಗ್ಯ ಹೊಂದಿದ್ದಲ್ಲಿ ಭವಿಷ್ಯದಲ್ಲಿ ಉತ್ತಮ ದೇಶ ಕಟ್ಟಲು ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಣೆ ಹಾಗೂ ಪೋಷಣಾ ಅಭಿಯಾನದ ಕುರಿತು ಭಿತ್ತಿ ಪತ್ರ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿ.ಪಂ ಸದಸ್ಯರಾದ ಕವಿತಾ ಲಿಂಗರಾಜು, ರವೀಂದ್ರ ಬೆಳವಾಡಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಶಿಶು ಅಭಿವೃದ್ಧಿ ಇಲಾಖೆ ಸಿ.ಡಿ.ಪಿ.ಒ ಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243