ದಿನದ ಸುದ್ದಿ
ಬಂಗಾಳಕೊಲ್ಲಿಯಲ್ಲಿ ಮ್ಯಾಂಡೋಸ್ ಚಂಡಮಾರುತ ; ಕರ್ನಾಟಕ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಮಳೆ
ಸುದ್ದಿದಿನ ಡೆಸ್ಕ್ : ಬಂಗಾಳಕೊಲ್ಲಿಯಲ್ಲಿ ಮ್ಯಾಂಡೋಸ್ ಚಂಡಮಾರುತ ಗಂಟೆಗೆ 180ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದ್ದು, ಕರ್ನಾಟಕ, ತಮಿಳುನಾಡು, ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ನಿನ್ನೆ ಬೆಳಗ್ಗೆಯಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬೆಂಗಳೂರಿನಲ್ಲಿ ಮಳೆಯ ಜತೆಗೆ ಥಂಡಿ ವಾತಾವರಣ ಕೂಡ ಹೆಚ್ಚಾಗಿದೆ. ನಿನ್ನೆ ಇಡೀ ದಿನ ಮಳೆಯಾಗಿದ್ದು, ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ಕರ್ನಾಟಕದ ಕೆಲವು ಭಾಗದಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ತೀರ ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮೀನುಗಾರರು ಕೂಡ ಸಮುದ್ರಯಕ್ಕೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮ್ಯಾಂಡೋಸ್ ಚಂಡಮಾರುತ ತಮಿಳುನಾಡಿನ ಕರಾವಳಿಯ ಮಾಮಲ್ಲಪುರಂ ದಾಟಿ ಮುಂದೆ ಸಾಗಿದ್ದು, ಕ್ರಮೇಣ ದುರ್ಬಲವಾಗಲಿದೆ. ಅದರ ಪರಿಣಾಮ ಶ್ರೀಹರಿಕೋಟಾ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ಕೇರಳ ಕರಾವಳಿ ಭಾಗದ ಮೇಲೆ ಉಂಟಾಗಲಿದ್ದು, ಸಾಧಾರಣ ಮಳೆಯಾಗಲಿದೆ.
ಚಂಡಮಾರುತದ ಪರಿಸ್ಥಿತಿ ಕುರಿತಂತೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಚೆನ್ನೈ ಸುತ್ತಮುತ್ತ ಇರುವ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸ್ಟ್ಯಾಲಿನ್ ಮೀನುಗಾರ ಸಮಸ್ಯೆಗಳನ್ನು ಆಲಿಸಿದರು.
ಸರ್ಕಾರ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ಅಪಾಯದ ಪ್ರಮಾಣ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.
ತಮಿಳುನಾಡಿನ ಮಹಾನಗರ ಪಾಲಿಕೆಯಲ್ಲಿ ಮಳೆಯಿಂದ ಆಗಿರುವ ತೊಂದರೆಗೆ ಪರಿಹಾರ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಪಾಲಿಕೆಯ ಆಯುಕ್ತ ಗಗನ್ ದೀಪ್ ಸಿಂಗ್ ಬೇಡಿ ಅವರಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು ಎಂದು ವರದಿಯಾಗಿದೆ. ಚಂಡಮಾರುತದಿಂದ ಪುದುಚೆರಿಯಲ್ಲಿಯೂ ಸಹ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಿಸಿತ್ತು.
ಚಂಡಮಾರುತದ ಪರಿಣಾಮ ಚಳಿಗಾಳಿ ಬೀಸುತ್ತಿದೆ. ಆಂಧ್ರದ ಕರಾವಳಿಯಲ್ಲಿ ಮೀನುಗಾರರು ಕಡಲಿಗಿಳಿಯದಂತೆ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಎಲ್ಲಾ ಕರಾವಳಿಗಳಲ್ಲಿ ಸಾಧಾರಣದಿಂದ ಕೂಡಿದ ಹಗುರ ಮಳೆಯಾಗುವ ನಿರೀಕ್ಷೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243