ದಿನದ ಸುದ್ದಿ
ಭಾರತ ಸರಕಾರ ಮರಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲಿ : ಡಿ.ಕೆ. ಶಿವಕುಮಾರ್
ಸುದ್ದಿದಿನ ಡೆಸ್ಕ್ : ಶತಮಾನ ಕಂಡ ಮಹಾಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ತುಮಕೂರಿನ ಸಿದ್ದಗಂಗ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮೀಜಿಗಳ ಲಿಂಗೈಕ್ಯಕ್ಕೆ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಕಂಬನಿ ಮಿಡಿದಿದ್ದಾರೆ.
ಸಿದ್ದಗಂಗ ಶ್ರೀಗಳು ಅಪ್ಪಟ ಮನುಷ್ಯತ್ವದಿಂದಲೇ ದೈವತ್ವಕ್ಕೆ ಏರಿದ ಸದ್ಗುರುಗಳು. ಜಾತಿ, ಪಂಗಡ, ಧರ್ಮಕ್ಕೆ ಅತೀತರಾದವರು. ನಡೆ-ನುಡಿಯಲ್ಲಿ ಮಾನವೀಯ ಧರ್ಮವನ್ನೇ ಉಸಿರಾಡಿದವರು. ಮಾನಲ ಕುಲವೊಂದೇ ಎಂದು ಅನುಷ್ಠಾನ ಮುಖೇನ ಸಾರಿದವರು ಎಂದು ಶಿವಕುಮಾರ್ ಬಣ್ಣಿಸಿದ್ದಾರೆ.
ಅನ್ನ, ಆಶ್ರಯ, ಆರೋಗ್ಯ, ಅಕ್ಷರ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾದವರು. ಅವರ ಭವಿಷ್ಯತ್ತಿಗೆ ಕಣ್ಣಾದವರು. ಶ್ರೀಗಳ ಕೃಪಾಕಟಾಕ್ಷದಲ್ಲಿ ಬೆಳೆದ ಅಸಂಖ್ಯ ವಿದ್ಯಾರ್ಥಿಗಳು ಕರ್ನಾಟಕ, ಭಾರತದ ಗಡಿ ದಾಟಿ ಪ್ರಪಂಚದ ಮೂಲೆಮೂಲೆಗಳಲ್ಲೂ ಸಲ್ಲಿಸುತ್ತಿದ್ದಾರೆ. ತುಮಕೂರಿನಿಂದ ಅಮೆರಿಕದವರೆಗೂ ನಾನಾ ಕ್ಷೇತ್ರಗಳ ಸೇವಾ ಕೈಂಕರ್ಯದಲ್ಲಿ ಸ್ವಾಮೀಜಿಗಳ ಛಾಪು ಪ್ರತಿಫಲಿಸುವಂತೆ ನೋಡಿಕೊಂಡಿದ್ದಾರೆ. ಸಿದ್ದಗಂಗ ಶ್ರೀಗಳು ಹಾಗೂ ಮಠದ ಹೆಸರು ಎಲ್ಲೆಡೆ ಪಸರಿಸಿದ್ದಾರೆ. ಅಂತಹ ಅಸಂಖ್ಯಾತರಿಗೆ ಆಶ್ರಯದಾತರಾಗಿದ್ದ, ಕರುನಾಡಿನ ಕಣ್ಬೆಳಕಾಗಿದ್ದ ಶ್ರೀಗಳು ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರನ್ನು ಕಳೆದುಕೊಂಡ ನಾವೆಲ್ಲರೂ ನಿಜಕ್ಕೂ ತಬ್ಬಲಿಗಳಾಗಿದ್ದೇವೆ ಎಂದು ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದ ಸಮಕಾಲೀನ ರಾಜಕೀಯ ಸುಕ್ಕುಗಳಿಗೆ ಪರಿಹಾರ, ಸಮಗ್ರತೆ, ಸ್ಥಿರ ಆಡಳಿತದ ಮೂಲಕ ಅಭಿವೃದ್ಧಿ ಸಾಧನೆಗೆ ಧಾರ್ಮಿಕ ಮುಖಂಡರ ಮಾರ್ಗದರ್ಶನ, ಚಿಂತನೆ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸಿದ್ದ ಶ್ರೀಗಳು ರಾಜಕೀಯ ಮುಖಂಡರ ಸನ್ಮಾರ್ಗದ ನಂದಾದೀಪವಾಗಿದ್ದರು. ಆ ಮಹಾನುಭಾವರ ಅಗಲಿಕೆ ನೋವು ತಡೆದುಕೊಳ್ಳುವ ಶಕ್ತಿಯನ್ನು ಅವರ ಕೋಟ್ಯಂತರ ಭಕ್ತರು, ಅನುಯಾಯಿಗಳಿಗೆ ಆ ಭಗವಂತ ನೀಡಲಿ. ಶ್ರೀಗಳು ಮತ್ತೊಮ್ಮೆ ಈ ನಾಡಿಗೆ ಹುಟ್ಟಿ ಬರಲಿ ಎಂದು ಸಚಿವ ಶಿವಕುಮಾರ್ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾನವ ಕುಲಕೋಟಿಗೆ ಶ್ರೀಗಳು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಭಾರತ ಸರಕಾರವು ಮರಣೋತ್ತರವಾಗಿಯಾದರೂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401