ದಿನದ ಸುದ್ದಿ
ಠಾಕೂರರ ಕೇರಿಯಲ್ಲಿ ದಲಿತ ವರನ ಮೆರವಣಿಗೆ
ಸುದ್ದಿದಿನ ಡೆಸ್ಕ್: ಉತ್ತರ ಪ್ರದೇಶದ ಕಾಸ್‍ಗಂಜ್‍ನ ನಿಜಾಂಪುರ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರದ್ದೇ ಕಾರುಬಾರು. ಅವರು ಹೇಳಿದ್ದೇ ತೀರ್ಪು, ಕೈಗೊಂಡಿದ್ದೇ ತೀರ್ಮಾನ.
ಠಾಕೂರ್ ಎಂಬ ಮೇಲ್ಜಾತಿಯ ಸಮುದಾಯದವರೇ ವಾಸವಿರುವ ಈ ಬೀದಿಗಳಲ್ಲಿ ಇದೇ ಮೊದಲಬಾರಿಗೆ ದಲಿತ ವರನೊಬ್ಬನ ಮೆರವಣಿಗೆ ನಡೆದಿದೆ.
ಉತ್ತರಪ್ರದೇಶದಲ್ಲಿ ಮದುವೆ ಸಂದರ್ಭದಲ್ಲಿ ವಧುವರರ ಮೆರವಣಿಗೆ ಮಾಡುವುದು ಸಂಪ್ರದಾಯ. ಈ ಊರಿನಲ್ಲಿರುವ ದಲಿತ ಹುಡುಗ ಜಾದವ್, ಮದುವೆಯಾಗುತ್ತಿದ್ದ ಹುಡುಗಿ ನಿಜಾಂಪುರದಲ್ಲಿ ವಾಸವಿದ್ದಾಳೆ.
ಹೇಳಿಕೇಳಿ ಮೇಲ್ಜಾತಿಯವರೇ ವಾಸವಿರುವ ಈ ಗ್ರಾಮದಲ್ಲಿ ಮದುವೆ ಮೆರವಣಿಗೆ ಮಾಡಬೇಕೆಂದು ಜಾದವ್ ಅವರು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅನುಮತಿ ಸಿಗಲಿಲ್ಲ. ಹಾಗಂತ ಜಾದವ್ ಪಟ್ಟು ಬಿಡಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿ ಅನುಮತಿ ಪಡೆದುಬಿಟ್ಟ.
ಕೊನೆಗೆ ಹತ್ತುಇನ್ಸ್‍ಪೆಕ್ಟರ್‍ಗಳು, 22 ಸಬ್ ಇನ್ಸ್‍ಪೆಕ್ಟರ್‍ಗಳು, 35 ಮಂದಿ ಹೆಡ್ ಕಾನ್ಸ್‍ಟೆಬಲ್‍ಗಳು ಹಾಗೂ 100 ಮಂದಿ ಪೇದೆಗಳ ಬಿಗಿ ಭದ್ರತೆಯೊಂದಿಗೆ ಜಾದವ್‍ನ ಮೆರವಣಿಗೆ ಮಾಡಲಾಯಿತು.
“ಇವತ್ತು ನಾನೊಬ್ಬ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದೇನೆ. ಅವರಿಗೂ ಸಿಗದ ಭದ್ರತೆ ನನಗೆ ಸಿಕ್ಕಿದೆ. ದಲಿತ ವರರ ಮೆರವಣಿಗೆ ಯಾವಾಗಲೂ ಈ ಬೀದಿಯಲ್ಲಿ ಆಗಿರಲಿಲ್ಲ. ನಾನು ಹೊಸ ದಾಖಲೆ ಬರೆದಿದ್ದೇನೆ. ಇದೆಲ್ಲಾ ಸಾಧ್ಯವಾಗಿದ್ದು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರಿಂದ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಲಾಗಿದೆ. 21ನೇ ಶತಮಾನದಲ್ಲೂ ದಲಿತರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಅದರ ವಿರುದ್ಧದ ಒಂದು ಪ್ರತಿಭಟನೆ ನನ್ನದು,” ಎಂದು ಹೆಮ್ಮೆಯಿಂದ ಹೇಳುತ್ತಾರೆ ಜಾದವ್.