ಬಹಿರಂಗ

ಅಸ್ಪೃಶ್ಯ ಸಮುದಾಯಗಳೂ ಕ್ಷೌರದ ಅಂಗಡಿಗಳನ್ನು ತೆರೆಯಲಿ

Published

on

ಕ್ಷೌರ, ಅಸ್ಪೃಶ್ಯತೆ ಆಚರಿಸಲ್ಪಡುವ ಬಹು ದೊಡ್ಡ ಕ್ಷೇತ್ರ ಇದು. ದೊಡ್ಡ ಕ್ಷೇತ್ರ, ಯಾಕೆಂದರೆ ಕ್ಷೌರ ಮಾಡಲು ಮುಟ್ಟಲೇ ಬೇಕಲ್ಲವೆ? ಮುಟ್ಟದೆ, ಸ್ಪರ್ಶ ಮಾಡದೆ ಕ್ಷೌರ ಮಾಡಲು ಸಾಧ್ಯವೆ? ಇಲ್ಲ. ಸ್ಪರ್ಶ ಮಾಡುವ ಕಾರಣಕ್ಕಾಗಿ ಅಲ್ಲಿ ಅಸ್ಪೃಶ್ಯತೆ ಸಹಜ. ಹಾಗಿದ್ದರೆ ಏನು ಮಾಡಬೇಕು? ಬೇಡಬೇಕೆ ಕ್ಷೌರದ ಅಂಗಡಿ ಮುಂದೆ ನಿಂತು? ಅಥವ ಕ್ಷೌರ ಮಾಡಿಸಿಕೊಡಿ ಎಂದು ಸವರ್ಣೀಯರನ್ನು ಕಾಡಿ ಪೀಡಿಸಬೇಕೆ? Never. ಹಾಗಿದ್ದರೆ ಪರಿಹಾರ? ದಲಿತರೆ ಕ್ಷೌರದ ಅಂಗಡಿಗಳನ್ನು ತೆರೆಯುವುದು.

ಉದಾಹರಣೆಗೆ ನಾನು ಚಿಕ್ಕವನಿದ್ದಾಗ ದಲಿತನೇ ಆದ ನಮ್ಮ ಪಕ್ಕದ ಊರಿನ ಸಿದ್ದಣ್ಣ ಒಂದು ಕಬ್ಬಿಣದ ಪೆಟ್ಟಿಗೆ ಜೊತೆಗೊಂದಿಷ್ಟು ಬ್ಲೇಡ್ ಕ್ಷೌರ ಮಾಡಲು ರೇಜರ್ ತರುತ್ತಿದ್ದರು. ಭಾನುವಾರ ಆಯಿತೆಂದರೆ ಸಿದ್ದಣ್ಣ ನಮ್ಮೂರಿಗೆ ಹಾಜರ್ ಮುದುಕರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಸಿದ್ದಣ್ಣನ ಮುಂದೆ ಕ್ಯೂ. ನಮ್ಮದೆ ಕೆನ್ನೆಯನ್ನು ನಮ್ಮದೆ ಸಹೋದರನೊಬ್ಬ ಅಸ್ಪೃಶ್ಯತೆಯ ಸೋಂಕಿನ ಲವಲೇಶವೂ ಇಲ್ಲದೆ ಮುಟ್ಟುತ್ತ ಶೇವಿಂಗ್ ಮಾಡುತ್ತಿದ್ದರೆ… ಕಟಿಂಗ್ ಮಾಡುತ್ತಿದ್ದರೆ… ಆಹಾ, ಅದರ ಮಜಾನೇ ಬೇರೆ! ಬಹುಶಃ ಈಗಲೂ ಕೂಡ ಅಂತಹ ಆತ್ಮೀಯ ಕಟಿಂಗ್ ನಾನು ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ನಾವು ಕಾಣದ್ದೆಂದರೆ ಹೇರ್ ಕಟಿಂಗ್ ನಲ್ಲಿ ಅಸ್ಪೃಶ್ಯತೆ. ಆದರೆ ಇಂತಹ ಅಸ್ಪೃಶ್ಯತೆಯನ್ನು ಈಗ ಕೆಲ ಊರುಗಳಲ್ಲಿ ಈಗಲೂ ಇರುವುದನ್ನು ಕೇಳಿದಾಗ ನನಗೆ ನಮ್ಮ ಬಾಲ್ಯದ ಸಿದ್ದಣ್ಣ ಜ್ಞಾಪಕಕ್ಕೆ ಬಂದ. ಮತ್ತೆ ಹೇಳುತ್ತೇನೆ ದಲಿತರಲ್ಲೂ ನಮ್ಮೂರ ಸಿದ್ದಣ್ಣಂದಿರು ಹುಟ್ಟಿಕೊಂಡರೆ? ದಲಿತರಿಗೆ ಕ್ಷೌರದಂಗಡಿಯ ಅಸ್ಪೃಶ್ಯತೆಯ ಕಾಟ ಇರೊಲ್ಲ ಹಾಗೆ ಆರ್ಥಿಕವಾಗಿಯೂ ಸಂಪಾದನೆಯ ದಾರಿಯೊಂದು ಕಾಣುತ್ತದೆ.

ಮೊನ್ನೆ ಪತ್ರಿಕೆಯೊಂದರಲ್ಲಿ ಬಳ್ಳಾರಿಯ ಗ್ರಾಮವೊಂದರಲ್ಲಿ ದಲಿತರಿಗೆ ಕ್ಷೌರ ಮಾಡೊಲ್ಲ ನೀರು ಕೊಡೊಲ್ಲ ಎಂಬ ಸುದ್ದಿ ಓದಿದಾಗ ದಲಿತರಲ್ಲೂ ಕ್ಷೌರಿಕರು ಯಾಕೆ ಹುಟ್ಟಿಕೊಳ್ಳಬಾರದು ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು. ಒಂದು ತಿಳಿಯಿರಿ ನಮ್ಮೆಲ್ಲ ಸಮಸ್ಯೆಗಳಿಗೂ ಸವರ್ಣೀಯರತ್ತ ದೂರುವುದು ಥರವಲ್ಲ. ನಮ್ಮ ಸಮಸ್ಯೆಗಳ ನಿವಾರಣೆಗಾಗಿ ನಾವೂ ಕೂಡ ಒಂದಷ್ಪು ಪರ್ಯಾಯ ದಾರಿ ಏನೇನು ಕಾಣಬಹುದು ಎಂಬುದಿಲ್ಲಿ ಮುಖ್ಯ. ಎಲ್ಲಾ ಸಮಸ್ಯೆಗಳಿಗೂ ಅಟ್ರಾಸಿಟಿ ಕೇಸ್ ಮುಖ್ಯವಾಗೊಲ್ಲ. ಆದ ಕಾರಣ ಅಸ್ಪೃಶ್ಯತೆ ಆಚರಿಸಲ್ಪಡುವ ಅದು ಕ್ಷೌರವಿರಬಹುದು, ಹೊಟೆಲ್ ಇರಬಹುದು ದಲಿತರು ಪರ್ಯಾಯ ದಾರಿ ನೋಡಲೆ ಬೇಕಾಗುತ್ತದೆ. ನಿಜ ಇದರಿಂದ ತತಕ್ಷಣಕ್ಕೆ ಆರ್ಥಿಕ ನಷ್ಟವಾಗಬಹುದು ಆದರೆ ಅಸ್ಪೃಶ್ಯತೆಯಂತಹ ಸಾಮಾಜಿಕ ನಷ್ಟ ತುಂಬಬಹುದು. ಹಾಗೆಯೇ ದೂರಗಾಮಿ ನೆಲೆಯಲ್ಲಿ ಆರ್ಥಿಕವಾಗಿಯೂ ಕೂಡ ಅದು ನಿರುದ್ಯೋಗ ಓಡಿಸುತ್ತದೆ ಲಾಭ ತಂದುಕೊಡುತ್ತದೆ. ಈ ಹಿನ್ನೆಲೆಯಲ್ಲಿ ಇತ್ತ ಯೋಚಿಸಲಿ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version