ಬಹಿರಂಗ
ಕರ್ನಾಟಕದಲ್ಲಿ ದಲಿತರು
‘ಹಿಂದೂ’ ಎಂಬ ಪದದಂತೆ ‘ದಲಿತ’ವೂ ಈಚಿನ ಸೃಷ್ಟಿ. ಆದರೆ ‘ಹಿಂದೂ’ ಪದಕ್ಕಿರುವ ಮತೀಯ ವಾಸನೆ ದಲಿತಕ್ಕಿಲ್ಲ. ಎರಡಕ್ಕೂ ರಾಜಕೀಯ ಆಯಾಮವಂತೂ ಇದೆ. ರಾಷ್ಟ್ರೀಯ ವಿಮೋಚನಾ ಚಳುವಳಿಯ ಸಂದರ್ಭದಲ್ಲಿಯೇ ಡಾ. ಅಂಬೇಡಕರ ಅವರು ‘ಹಿಂದೂ’ ಪರಿಕಲ್ಪನೆಯ ವಿರುದ್ಧ, ಹಿಂದೂಗಳ ವಿರುದ್ಧ, ದಲಿತ ನೆಲೆಯಲ್ಲಿ ನಿಂತು ಹೋರಾಡಿದರು.
‘ಸವರ್ಣೀಯರು’, ‘ಮೇಲ್ಜಾತಿ ಜನಗಳು’, ‘ಹಿಂದೂಗಳು’; ಅವರಲ್ಲಿ ದಲಿತರು ಸೇರುವುದಿಲ್ಲ ಎಂಬ ಕಲ್ಪನೆ ಅಲ್ಲಿ ಖಚಿತವಿತ್ತು. ಇನ್ನೊಂದೆಡೆ ಎಡವಾದಿ ಚಿಂತಕರು ಈ ಎರಡೂ ಪದಗಳನ್ನು ಆಕಸ್ಮಿಕವಾಗಷ್ಟೇ ಬಳಸುತ್ತ ಬಂದಿದ್ದಾರೆ. ಅವರಿಗೆ ಎಲ್ಲ ಜಾತಿಗಳಲ್ಲಿರುವ ಬಡವರ ಮತ್ತು ದುಡಿಮೆಗಾರರ ಐಕ್ಯತೆ ಮುಖ್ಯ ಎಂಬ ವಿಚಾರವಿರುವುದರಿಂದ, ಚರ್ಚೆಯ ಪ್ರಧಾನ ಪರಿಕಲ್ಪನೆಗಳನ್ನಾಗಿ ಅವರು ‘ಹಿಂದೂ’, ‘ದಲಿತ’ಗಳನ್ನು ಬಳಸಲಿಲ್ಲ.
ಕರ್ನಾಟಕದಲ್ಲಿ ‘ದಲಿತ’ಕ್ಕೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಜಾತಿ ಜನಸಮೂಹ ಎಂಬ ಸ್ಥೂಲವಾದ ಅರ್ಥವನ್ನು ಕಲ್ಪಿಸಲಾಯಿತು. ಆದರೆ ಎಸ್.ಸಿ. (ಪರಿಶಿಷ್ಟ ಜಾತಿ), ಎಸ್.ಟಿ(ಪರಿಶಿಷ್ಟ ಪಂಗಡ) ಮತ್ತು ಹಿಂದುಳಿದ ಜಾತಿಗಳಲ್ಲಿ ಯಾವ ಯಾವ ಜಾತಿಗಳು ‘ದಲಿತ’ದಲ್ಲಿ ಸೇರಬೇಕೆಂದು ಸ್ಪಷ್ಟವಾಗಿ ನಿರ್ಧಾರವಾಗಲಿಲ್ಲ.
ಒಂದು ದಾಖಲೆಯ ಪ್ರಕಾರ ಭಾರತದಲ್ಲಿ, ಮುಟ್ಟಿದರೆ ಮೈಲಿಗೆಯಾಗುವ ಅಂದರೆ ಅಸ್ಪøಶ್ಯರ 429 ಜಾತಿಗಳಿವೆ ಎಂದೂ, ಇವರು ಭಾರತದ ಜನಸಂಖ್ಯೆಯ ಶೇಕಡಾ 14.9 ರಷ್ಟಿದ್ದಾರೆಂದೂ ತಿಳಿದು ಬಂದಿದೆ.
ಕರ್ನಾಟಕದ ದಲಿತರೆಂದರೆ, ಹೊಲೆಯರು, ಮಾದಿಗರು, ಸಮಗಾರರು, ಡೋರ, ಡಕ್ಕಲ, ಮಾಚಾಳ, ಪಂಬದ, ಪರವ, ನಲಿಕೆ, ಕೊರಗ, ಮನ್ಸ, ಮೇರ ಮೊದಲಾದ ಅಸ್ಪøಶ್ಯ ಜಾತಿ ಜನ ಎಂಬುದು ಗ್ರಹಿತವಾಗೇ ಇತ್ತು. ಇವರ ನೇತೃತ್ವದಲ್ಲಿ ಉಳಿದ ಶೋಷಿತ ಜಾತಿಗಳು ನೆರೆಯಬೇಕು ಎಂಬ ಕಲ್ಪನೆ ಬೆಳೆಯಿತು. ಮುಖ್ಯವಾಗಿ ‘ದಲಿತ ಸಂಘರ್ಷ ಸಮಿತಿ’ಯು ಸಂಘಟನೆ ಮತ್ತು ಸಿದ್ಧಾಂತದ ನೆಲೆಯಲ್ಲಿ ಈ ತತ್ವವನ್ನು ಪ್ರತಿಪಾದಿಸಿತು.
ಈ ಬರಹದ ಸಂದಂರ್ಭದಲ್ಲಿ ಅಸ್ಪøಶ್ಯರನ್ನು ಮಾತ್ರ ದಲಿತರು ಎಂದು ಪರಿಗಣಿಸಲಾಗಿದೆ.
ಕರ್ನಾಟಕದ ದಲಿತರಲ್ಲಿ ಹೊಲೆಯರು ಮತ್ತು ಮಾದಿಗರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರ ಸಂಸ್ಕøತಿಯನ್ನೇ ಹೋಲುವ ಅಸ್ಪøಶ್ಯರು ಆಂಧ್ರ, ತಮಿಳುನಾಡು ಮತ್ತು ಕೇರಳಗಳಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳುಗಳಂತೂ ದ್ರಾವಿಡ ಭಾಷೆಗಳು.
ಈ ಭಾಷೆಗಳನ್ನಾಡುವ ರಾಜ್ಯಗಳ ದಲಿತರಲ್ಲಿರುವ ಸಮಾನಾಂಶಗಳು ಭಾರತದ ದಲಿತರ ಚರ್ಚೆಯ ಸಂದರ್ಭದಲ್ಲಿ ಪ್ರಧಾನ ನೆಲೆಗಟ್ಟನ್ನು ಒದಗಿಸುತ್ತವೆ. ಇಂಡೋ ಆರ್ಯನ್ ಭಾಷೆಗಳಾದ ಮರಾಠಿ, ಗುಜರಾಥಿ, ಬಂಗಾಲಿ, ಪಂಜಾಬಿ, ಹಿಂದಿ ಮೊದಲಾದ ಭಾಷೆಗಳನ್ನಾಡುವ ದಲಿತರೂ ಕೂಡ ದ್ರಾವಿಡ ಭಾಷಿಕ ದಲಿತರಿಗಿಂತ ಭಿನ್ನವಾಗಲಾರರು ಎಂದು ಪ್ರತಿಪಾದಿಸಲು ಬೇಕಾದ ಸಾಕ್ಷ್ಯಾಧಾರಗಳು ಸಾಕಷ್ಟಿವೆ.
ಒಟ್ಟಾರೆ ಇಡೀ ದೇಶದ ಅಸ್ಪøಶ್ಯರ ಬದುಕು ಬವಣೆ, ಸಂಸ್ಕøತಿ ಪರಂಪರೆ ಒಂದೇ ಆಗಿದೆ. ಇದು ಬರಿ ಸ್ಥೂಲವಾದ ಗ್ರಹಿಕೆಯಷ್ಟೇ ಅಲ್ಲ, ಸಂಬಂಧ ಪಡುವ ವಿವಿಧ ಸಾಮಾಜಿಕ ಶಿಸ್ತುಗಳಿಂದ ಸಮರ್ಥಿಸಲ್ಪಡುತ್ತಿರುವ ವಿಚಾರ.
ಪ್ರಾದೇಶಿಕ, ಭೌಗೋಳಿಕ ವಿಭಿನ್ನತೆಗಳಿಂದಾಗಿ, ದಲಿತರ ಅಖಂಡ ಸಂಸ್ಕøತಿಯಲ್ಲಿ ವೈವಿಧ್ಯತೆಗಳು ಸೂಕ್ಷ್ಮ ವ್ಯತ್ಯಾಸಗಳಿರುವುದು ಸಹಜ. ಆಯಾ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಉಂಟಾಗಿರುವ ಸಾಮಾಜಿಕ ಬೆಳವಣಿಗೆಯ ಏರುಪೇರುಗಳನ್ನು ಕೂಡ ಗಮನಿಸಬೇಕಾಗುತ್ತದೆ.
ಬೇರೆ ಬೇರೆ ಸಂಸ್ಕøತಿ ಜನಸಮೂಹಗಳ ಚಾರಿತ್ರಿಕ ಪ್ರಭಾವಗಳು, ದಲಿತ ಸಂಸ್ಕøತಿಯಲ್ಲಿ ವ್ಯತ್ಯಾಸಗಳಾಗಲು ಕಾರಣವಾಗಿವೆ. ಪ್ರತಿಯೊಂದು ರಾಜ್ಯದ ದಲಿತರ ಬದುಕು ಮತ್ತು ಸಂಸ್ಕøತಿ ಪರಂಪರೆಗಳ ದಾಖಲೆಯಾಗಬೇಕಾದ ಅಗತ್ಯವಿದೆ. ಈ ವರೆಗೆ ನಡೆದಿರುವ ಕೆಲಸಗಳು ತೃಪ್ತಿಕರವಾಗಿಲ್ಲ.
–ಎಸ್.ಎಸ್. ಹಿರೇಮಠ
ಸುದ್ದಿದಿನ.ಕಾಂ|ವಾಟ್ಸಾಪ್|9980346243