ಬಹಿರಂಗ
ಡಾನಿಷ್ ಸಿದ್ದಿಖಿ- ಅಸಹಿಷ್ಣುತೆಗೆ ಮತ್ತೊಂದು ಬಲಿ
- ನಾ ದಿವಾಕರ
ಆಫ್ಘಾನಿಸ್ತಾನದ ಬಂಡುಕೋರರ ದಾಳಿಗೆ ಬಲಿಯಾದ ಭಾರತದ ಪತ್ರಿಕಾ ಛಾಯಾಗ್ರಾಹಕ ಡಾನಿಷ್ ಸಿದ್ದಿಖಿ ( 1983-2021 ) ಬಹುಶಃ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಬಲಪಂಥೀಯ ಮತಾಂಧತೆ, ಅಸಹಿಷ್ಣುತೆ ಮತ್ತು ಉಲ್ಬಣಿಸುತ್ತಿರುವ ಹಿಂಸಾತ್ಮಕ ರಾಜಕಾರಣಕ್ಕೆ ಸಾಕ್ಷಿಯಾಗಿ, ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ.
ರಾಯ್ಟರ್ಸ್ ಸುದ್ದಿ ಸಂಸ್ಥೆಯ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ 38 ವರ್ಷದ ಡಾನಿಷ್ ಸಿದ್ದಿಖಿ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವಿನ ಕಾಳಗವನ್ನು ಸೆರೆಹಿಡಿಯುತ್ತಿದ್ದ ವೇಳೆ, ತಾಲಿಬಾನ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಕಳೆದ ಹತ್ತು ವರ್ಷದಿಂದಲೂ ಈ ಸುದ್ದಿ ಸಂಸ್ಥೆಯೊಡನೆ ಕಾರ್ಯ ನಿರ್ವಹಿಸುತ್ತಿದ್ದ ಡಾನಿಷ್ 2018ರಲ್ಲಿ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದರು.
ಇತ್ತೀಚೆಗೆ ಕೋವಿದ್ 2ನೆಯ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಸಾವಿರಾರು ಅನಾಥ ಶವಗಳಿಗೆ ಸಾಮೂಹಿಕ ಶವಸಂಸ್ಕಾರ ಮಾಡಿದ ಚಿತ್ರಗಳನ್ನೂ ಸೆರೆಹಿಡಿದಿದ್ದ ಡಾನಿಷ್, ಕಳೆದ ವರ್ಷದ ದೆಹಲಿ ಗಲಭೆಗಳ ಸಂದರ್ಭದಲ್ಲೂ ತಮ್ಮ ಮನಮುಟ್ಟುವ ಛಾಯಾಚಿತ್ರಗಳ ಮೂಲಕ ವಾಸ್ತವಗಳನ್ನು ಜನರ ಮುಂದಿಟ್ಟಿದ್ದರು.
“ವಾಣಿಜ್ಯ, ವ್ಯಾಪಾರ ಮತ್ತು ರಾಜಕೀಯ ಚಟುವಟಿಕೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವುದಕ್ಕಿಂತಲೂ, ಸ್ಫೋಟಕ ಸುದ್ದಿಗಳ ಹಿಂದಿನ ಮಾನವೀಯ ಮುಖವನ್ನು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೆರೆಹಿಡಿದು ಜನರಿಗೆ ಮುಟ್ಟಿಸುವುದರಲ್ಲಿ ನನಗೆ ಹೆಚ್ಚಿನ ಖುಷಿ ಇದೆ ”ಏಂದು ಹೇಳುತ್ತಿದ್ದ ಡಾನಿಷ್ ಇಂತಹುದೇ ಚಿತ್ರೀಕರಣದ ಸಂದರ್ಭದಲ್ಲಿ ಅಮಾನುಷ ಶಕ್ತಿಗಳ ದಾಳಿಗೆ ಬಲಿಯಾಗಿರುವುದು ವಿಡಂಬನೆ ಎನಿಸುತ್ತದೆ.
ಜಗತ್ತಿನ ರಾಜಕಾರಣದಲ್ಲಿ ಸಾಮಾನ್ಯ ಜನರನ್ನು ಕಾಡುತ್ತಿರುವ ಹಿಂಸೆಗೆ ನಾನಾ ರೂಪಗಳು. ಪ್ರಭುತ್ವಗಳ ವಿರುದ್ಧ ಹೋರಾಡುವ ವಿಚ್ಚಿದ್ರಕಾರಿ ಶಕ್ತಿಗಳ ಹಿಂಸೆ ಒಂದೆಡೆಯಾದರೆ, ಪ್ರಜಾ ವಿಮೋಚನೆಯ ಹೆಸರಿನಲ್ಲಿ ದಂಗೆಯೆದ್ದು, ಪ್ರಭುತ್ವದ ಶಕ್ತಿಗೆ ಸರಿಸಮನಾಗಿ ಹೋರಾಡುತ್ತಾ ಸಮಾಜದಲ್ಲಿ ಹಿಂಸೆ, ಕ್ಷೋಭೆಯನ್ನು ಹರಡುವ ಉಗ್ರಗಾಮಿಗಳ ಹಿಂಸೆ ಮತ್ತೊಂದೆಡೆ.
ಸಾಮಾನ್ಯ ಜನರ ದೃಷ್ಟಿಯಿಂದ ನೋಡಿದಾಗ ಹಿಂಸೆ ಅಥವಾ ಹಿಂಸಾತ್ಮಕ ಕೃತ್ಯಗಳನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಬಂಧಿಸಿಡಲು ಸಾಧ್ಯವೇ ಇಲ್ಲ. ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಪೈಶಾಚಿಕ ಕೃತ್ಯಗಳು ಪಾಕಿಸ್ತಾನದ ಪೇಷಾವರದಲ್ಲೂ ಸಂಭವಿಸಿವೆ, ಭಾರತದ ಗುಜರಾತ್ನಲ್ಲೂ ಸಂಭವಿಸಿವೆ, ಮುಂಬಯಿಯಲ್ಲೂ ಘಟಿಸಿವೆ. 2020ರಲ್ಲಿ ಭಾರತದ ರಾಜಧಾನಿ ದೆಹಲಿಯಲ್ಲೂ ಸಂಭವಿಸಿದೆ.
ಈ ಹಿಂಸಾಕೃತ್ಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉಗ್ರವಾದ, ಉಗ್ರಗಾಮಿ ಚಟುವಟಿಕೆ, ಭಯೋತ್ಪಾದನೆ, ಜಿಹಾದ್ ಎಂದು ವರ್ಗೀಕರಿಸುವ ಜಗತ್ತಿನ ಪ್ರಭುತ್ವಗಳು ಜನಸಾಮಾನ್ಯರ ಪ್ರತಿರೋಧದ ಧ್ವನಿಯನ್ನು ಅಡಗಿಸಲು ಇನ್ನೂ ಹೆಚ್ಚಿನ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುತ್ತಿವೆ. ನಾಗರಿಕ ಸಮಾಜ ಇದನ್ನು ಗಮನಿಸುತ್ತಲೂ ಇದೆ. ಹತ್ಯೆಯಲ್ಲಿ ಪರ್ಯಾವಸಾನಗೊಳ್ಳುವ ಹಿಂಸೆ ಪ್ರಧಾನವಾಗಿ ಕಾಣುತ್ತದೆ. ಆದರೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುವ ಸಾರ್ವಭೌಮ ಪ್ರಜೆಗಳನ್ನು ಚಿತ್ರಹಿಂಸೆಗೊಳಪಡಿಸುವ ಪ್ರಭುತ್ವದ ಹಿಂಸಾತ್ಮಕ ಮಾರ್ಗಗಳು ಸಾರ್ವಜನಿಕ ಮಾನ್ಯತೆ ಪಡೆದುಬಿಡುತ್ತವೆ.
ಆಫ್ಘಾನಿಸ್ತಾನದಲ್ಲಿ ಇದು ಇನ್ನೂ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂದು ಡಾನಿಷ್ ಸಿದ್ದಿಖಿ ಸಾವಿಗೆ ಸಂತಾಪ ಸೂಚಿಸುವ ಅಮೆರಿಕದ ಅಧ್ಯಕ್ಷರಾಗಲೀ, ಇತರ ಸಾಮ್ರಾಜ್ಯಶಾಹಿ ರಾಷ್ಟ್ರಗಳ ನಾಯಕರಾಗಲೀ ತಮ್ಮ ಬೆನ್ನ ಹಿಂದಿನ ಚರಿತ್ರೆ ಮತ್ತು ಸಮಕಾಲೀನ ಘಟನೆಗಳತ್ತ ಒಮ್ಮೆ ನೋಡಿದರೆ, ಈ ಸಮರವೀರರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಬಲಿಯಾದ ಸಾವಿರಾರು, ಲಕ್ಷಾಂತರ ಜನರ ಶವಗಳ ಮೆರವಣಿಗೆಯೇ ಕಾಣುತ್ತದೆ.
ಇಂದು ಡಾನಿಷ್ ಕೊಲೆಗೆ ಕಾರಣರಾದ ತಾಲಿಬಾನ್ ಪಡೆಯೇ ಸಾಮ್ರಾಜ್ಯಶಾಹಿಯ , ಒಂದು ಕಾಲದ ಮುದ್ದಿನ, ಕೂಸು ಎನ್ನುವುದು ಚಾರಿತ್ರಿಕ ಸತ್ಯ. ಈ ತಾಲಿಬಾನ್ ಉಗ್ರರು ಇಸ್ಲಾಂ ಹೆಸರಿನಲ್ಲಿ ನಡೆಸುವ ನರಮೇಧಗಳಿಗೆ ಬಳಸಲಾಗುವ ಶಸ್ತ್ರಾಸ್ತ್ರಗಳ ಮೂಲವೇ ಅಮೆರಿಕದ ಪೆಂಟಗನ್. ಸಿರಿಯಾ, ಲೆಬನಾನ್, ಇರಾಕ್, ಯಮನ್ ಮತ್ತಿತರ ರಾಷ್ಟ್ರಗಳಲ್ಲಿ ಸಾಮ್ರಾಜ್ಯಗಳ ಡ್ರೋನ್ ದಾಳಿಗಳಿಗೆ ಬಲಿಯಾದ ಲಕ್ಷಾಂತರ ಅಮಾಯಕರ ಸಾಲಿಗೆ ತಾಲಿಬಾನ್ ತನ್ನದೂ ಒಂದಿಷ್ಟಿರಲಿ ಎಂದು ಶವಗಳನ್ನು ಸೇರಿಸುತ್ತಲೇ ಇರುತ್ತದೆ. ಡಾನಿಷ್ ಈ ಸಾವಿನ ಸರದಾರರ ಹರಕೆಯ ಕುರಿಯಂತೆ ಕಾಣುತ್ತಾರೆ.
ವಿಶ್ವದ ಎಲ್ಲ ಪ್ರಮುಖ ನಾಯಕರೂ ಡಾನಿಷ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊನೆಗೆ ತಾಲಿಬಾನ್ ಮುಖ್ಯಸ್ತರೂ ಸಹ ಸಂತಾಪ ವ್ಯಕ್ತಪಡಿಸುವ ಮೂಲಕ ಪಾಪಪ್ರಜ್ಞೆಯನ್ನು ತೊಳೆದುಕೊಂಡಿದ್ದಾಗಿದೆ. ಆದರೆ ಭಾರತದ ಪ್ರಜೆಯೊಬ್ಬ, ವಿದೇಶಿ ನೆಲದಲ್ಲಿ ತನ್ನ ವೃತ್ತಿಯಲ್ಲಿ ತೊಡಗಿರುವಾಗ ಉಗ್ರವಾದಿಗಳ ಧಾಳಿಗೆ ಬಲಿಯಾಗಿದ್ದರೂ ಭಾರತದ ಪ್ರಧಾನಿ, ವಿದೇಶಾಂಗ ಮಂತ್ರಿ ಅಥವಾ ಆಡಳಿತಾರೂಢ ಪಕ್ಷದ ನಾಯಕರು ವಿಷಾದವನ್ನೂ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ, ಡಾನಿಷ್ ಸಿದ್ದಿಖಿ #ಆತ್ಮನಿರ್ಭರ ಭಾರತದ ದೃಷ್ಟಿಯಲ್ಲಿ ಸಾವಿಗೆ/ಹತ್ಯೆಗೆ ಅರ್ಹನಾಗಿದ್ದ ವ್ಯಕ್ತಿ ಎನಿಸುತ್ತದೆ.
ಫಾದರ್ ಸ್ಟ್ಯಾನ್ ಸ್ವಾಮಿ ಅವರಂತೆ ಡಾನಿಷ್ ಸಿದ್ದಿಖಿಯೂ ಸಹ ಸಾವಿನ ಕದ ತಟ್ಟುತ್ತಿದ್ದ ಒಬ್ಬ ಸಂವೇದನಾಶೀಲ ಪ್ರಜೆ ಆಗಿದ್ದಿರಬಹುದು. ಹತ್ಯೆಯ ಹಿಂದಿನ ಹಿಂಸೆಗಿಂತಲೂ, ಹತ್ಯೆಯನ್ನು ಸಂಭ್ರಮಿಸುವ ಮನಸ್ಥಿತಿ ಮತ್ತು ಹತ್ಯೆಯ ಬಗ್ಗೆ ಮೌನ ವಹಿಸುವ ಮನಸ್ಥಿತಿ ಇನ್ನೂ ಹಿಂಸಾತ್ಮಕ ಅಲ್ಲವೇ ?
ಭಾರತಕ್ಕೆ ಇದೇನೂ ಹೊಸತಲ್ಲ. ಸಾವಿರಾರು ಸಿದ್ದಿಖಿಗಳು, ಸ್ವಾಮಿಗಳು, ನಿಯೋಗಿಗಳು, ಸಫ್ದಾರ್ ಹಷ್ಮಿಗಳು ಈ ದೇಶದ ಮಣ್ಣಲ್ಲಿ ಅನಾಥರಂತೆ ಮಣ್ಣಾಗಿ ಹೋಗಿದ್ದಾರೆ. ಕಳೆದ ವರ್ಷದ ಲಾಕ್ಡೌನ್ ವೇಳೆಯಲ್ಲಿ ಸಾವು ಬದುಕಿನೊಡನೆ ಸೆಣಸಾಡಿದ ವಲಸೆ ಕಾರ್ಮಿಕರು, ತಮ್ಮ ಮೂಲ ನೆಲೆಯಿಂದಲೇ ಉಚ್ಚಾಟಿಸಲ್ಪಟ್ಟು ನಿರಾಶ್ರಿತರಾದ ರೋಹಿಂಗ್ಯಾಗಳು, ವಾರಸುದಾರರಿಲ್ಲದೆ ಸಾಮೂಹಿಕವಾಗಿ ದಹಿಸಲ್ಪಟ್ಟ ಅಸಂಖ್ಯಾತ ಕೋವಿದ್ ಪೀಡಿತ ಶವಗಳು, ಗಂಗೆಯಲ್ಲಿ ತೇಲಿಬಂದ ಶವಗಳು, ಇವೆಲ್ಲವನ್ನೂ ತಮ್ಮ ಮಸೂರದಲ್ಲಿ ಬಂಧಿಸಿ ಸಾರ್ವಜನಿಕರ ಮುಂದಿಟ್ಟಿದ್ದ ಡಾನಿಷ್, ದೆಹಲಿ ಗಲಭೆಯ ಸಂದರ್ಭದಲ್ಲಿ ಸಾರ್ವಜನಿಕವಾಗಿ, ಕೈಕಟ್ಟಿ ನಿಂತಿದ್ದ ಪೊಲೀಸರ ಎದುರೇ ಪ್ರತಿಭಟನಕಾರರಿಗೆ ಪಿಸ್ತೂಲು ತೋರಿಸಿ ಹೆದರಿಸಿದ್ದ ಬಿಜೆಪಿ ನಾಯಕನ ಚಿತ್ರವನ್ನೂ ಸೆರೆಹಿಡಿದಿದ್ದರು. ಬಹುಶಃ ಸಾಯುವ ಅರ್ಹತೆ ಪಡೆಯಲು ಇಷ್ಟು ಸಾಕಾಗಿತ್ತು ಎನಿಸುತ್ತದೆ. ಡಾನಿಷ್ ಸಹ ಮತ್ತೊಂದು ಅನಾಥ ಶವವಾಗಿ ಅಂತ್ಯ ಕಂಡಿದ್ದಾರೆ.
ಹಥ್ರಾಸ್ನಲ್ಲಿ ನಡುರಾತ್ರಿಯಲ್ಲಿ ದಹಿಸಲ್ಪಟ್ಟ ಅತ್ಯಾಚಾರಕ್ಕೀಡಾದ ಯುವತಿಗೂ, ಜಾಮೀನು ದೊರೆಯದೆ ಸೆರೆವಾಸದಲ್ಲೇ ಅಂತ್ಯ ಕಂಡ ರೋಗಪೀಡಿತ ಸ್ಟ್ಯಾನ್ ಸ್ವಾಮಿಗೂ, ದನದ ಮಾಂಸದ ತುಂಡನ್ನು ಮನೆಯಲ್ಲಿಟ್ಟ ತಪ್ಪಿಗಾಗಿ ಹತ್ಯೆಗೀಡಾದ ಅಖ್ಲಾಕ್ಗೂ, ತಾಲಿಬಾನ್ ಉಗ್ರರ ಧಾಳಿಗೆ ಬಲಿಯಾದ ಡಾನಿಷ್ಗೂ ವ್ಯತ್ಯಾಸವೇನಿದೆ ? ಸಾವನ್ನು ಸಾಪೇಕ್ಷಗೊಳಿಸುವ ವಿಕೃತ ಪರಂಪರೆಯೊಂದನ್ನು ನಾವು, ಭಾರತೀಯರು ಪೋಷಿಸಿಕೊಂಡೇ ಬಂದಿದ್ದೇವೆ.
ಹಾಗೆಯೇ ನಮಗೆ ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ ಸತ್ತ 24 ಅಮಾಯಕರೂ ನಗಣ್ಯ ಎನಿಸಿಬಿಡುತ್ತಾರೆ. ಹಸಿವಿನಿಂದ ಕಂಗೆಟ್ಟು ನಡುಬೀದಿಯಲ್ಲೇ ಸತ್ತ ವಲಸೆ ಕಾರ್ಮಿಕರೂ ನಿಕೃಷ್ಟರಾಗಿಬಿಡುತ್ತಾರೆ. ಆತ್ಮಹತ್ಯೆಗೆ ಶರಣಾಗುವ ಲಕ್ಷಾಂತರ ರೈತರೂ ನಿರ್ಲಕ್ಷಿತರಾಗಿಬಿಡುತ್ತಾರೆ.
ನವ ಉದಾರವಾದ, ಬಲಪಂಥೀಯ ರಾಜಕಾರಣ, ಜಾತಿ ದ್ವೇಷ, ಮತಾಂಧತೆ, ದ್ವೇಷ ರಾಜಕಾರಣ ಮತ್ತು ಇವೆಲ್ಲವನ್ನೂ ಕಾಪಾಡಲು ಅಗತ್ಯವಾದ ಹಿಂಸಾತ್ಮಕ ಮನಸ್ಥಿತಿ ಇಂದು ವಿಭಿನ್ನ ಧಾರೆಗಳಲ್ಲಿ ನಮ್ಮ ನಡುವೆ ಪ್ರವಹಿಸುತ್ತಿದೆ. ದೇಶಾದ್ಯಂತ ಕೋವಿದ್ ಮೊದಲನೆ ಅಲೆಯ ಸಂದರ್ಭದಲ್ಲಿ ನೂರಾರು ವಲಸೆ ಕಾರ್ಮಿಕರು ಕೂಳಿಲ್ಲದೆ ಅನಾಥರಂತೆ ಸಾವನ್ನಪ್ಪಿದ್ದರು, ಎರಡನೆ ಅಲೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ, ಆಮ್ಲಜನಕದ ಕೊರತೆಯಿಂದ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.
ಆದರೆ ಈ ಸಾವುಗಳ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸಂಸತ್ತಿನಲ್ಲಿ ಹೇಳುವ ಮೂಲಕ ಕೇಂದ್ರ ಸರ್ಕಾರ ಕೈತೊಳೆದುಕೊಳ್ಳುತ್ತದೆ. ತಾಲಿಬಾನ್ ಕ್ರೌರ್ಯಕ್ಕೂ ಈ ಬೌದ್ಧಿಕ ಕ್ರೌರ್ಯಕ್ಕೂ ವ್ಯತ್ಯಾಸವೇನಾದರೂ ಕಾಣಲು ಸಾಧ್ಯವೇ ? ಒಟ್ಟಿನಲ್ಲಿ ಸಾಮಾನ್ಯ ಜನರ ಸಾವು ಸ್ವೀಕೃತವಾದ ಒಂದು ವಿದ್ಯಮಾನ, ಕೆಲವೊಮ್ಮೆ ಸ್ವೀಕಾರಾರ್ಹ, ಕೆಲವೊಮ್ಮೆ ಅಪೇಕ್ಷಿತ, ಕೆಲವೊಮ್ಮೆ ನಿರೀಕ್ಷಿತ ಇನ್ನು ಕೆಲವೊಮ್ಮೆ ನಿಗದಿತ. ಹೌದಲ್ಲವೇ ?
ಹಾಗಾಗಿಯೇ ಡಾನಿಷ್ ಸಿದ್ದಿಖಿ ಒಬ್ಬ ಹುತಾತ್ಮನಾಗಲಿಲ್ಲ. ವಿದೇಶಿ ಉಗ್ರವಾದಿಗಳ ಗುಂಡೇಟಿಗೆ, ವಿದೇಶಿ ನೆಲದಲ್ಲೇ ಬಲಿಯಾದ ಭಾರತದ ಪತ್ರಿಕಾ ಛಾಯಾಗ್ರಾಹಕನೊಬ್ಬನಿಗೆ ರಾಷ್ಟ್ರೀಯ ಸಮ್ಮಾನ ದೊರೆಯಲಿಲ್ಲ. ರಾಷ್ಟ್ರೀಯ ಸಂತಾಪವೂ ದೊರೆಯಲಿಲ್ಲ. ದ್ವೇಷ ರಾಜಕಾರಣದ ಮುದ್ದು ಕೂಸುಗಳು ಸಾಮಾಜಿಕ ತಾಣಗಳಲ್ಲಿ ಸಂಭ್ರಮಿಸಿ, ಕೇಕೆ ಹಾಕಿದ್ದವು. ಆಫ್ಘಾನಿಸ್ತಾನದ ಬಲಿಪೀಠದಲ್ಲಿ, ತಾಲಿಬಾನ್ ಅರಣ್ಯ ನ್ಯಾಯಕ್ಕೆ ಬಲಿಯಾದ ಡಾನಿಷ್ ಸಿದ್ದಿಖಿ , #ಆತ್ಮನಿರ್ಭರ ಭಾರತದ ದೃಷ್ಟಿಯಲ್ಲಿ ಓರ್ವ ಮುಸ್ಲಿಂ ಆಗಿಬಿಟ್ಟ, ಪ್ರತಿರೋಧದ ದನಿಯಾಗಿಬಿಟ್ಟ, ನಮ್ಮ ಸ್ವಘೋಷಿತ ದೇಶಪ್ರೇಮದ ವ್ಯಾಪ್ತಿಯಿಂದ ಹೊರತಾಗಿಬಿಟ್ಟ.
ಹಾಗಾಗಿ ಕ್ಯಾಮರಾ ಹಿಡಿದ ಈ ಸೇನಾನಿ ಶಸ್ತ್ರ ಹಿಡಿದ ಸೇನಾನಿಗಿಂತಲೂ ಭಿನ್ನವಾಗಿ ಕಂಡುಬಿಟ್ಟ. ತ್ರಿವರ್ಣ ಧ್ಜಜದ ಹೊದಿಕೆಗಾಗಲೀ, ಭಾವೈಕ್ಯತೆಯ ಸಂಕೇತವಾಗಿ ಸಮ್ಮಾನಕ್ಕಾಗಲೀ ಹಕ್ಕುದಾರನಾಗಲಿಲ್ಲ. ಕೊನೆಯ ಪಕ್ಷ ಆಳುವ ವರ್ಗಗಳ ಸಂತಾಪದ ಮಾತುಗಳಿಗೂ ಅರ್ಹನಾಗಲಿಲ್ಲ.
ಇದೇನೂ ಅತಿಶಯ ಎನಿಸುವುದಿಲ್ಲ. ಏಕೆಂದರೆ ಈ ಪವಿತ್ರ ಭೂಮಿಯಲ್ಲೇ ಕಳೆದ ಐದಾರು ವರ್ಷಗಳಲ್ಲಿ ಪತ್ರಕರ್ತರ ಮೇಲೆ 200ಕ್ಕೂ ಹೆಚ್ಚು ಧಾಳಿಗಳು ನಡೆದಿವೆ. 2014-19ರ ಅವಧಿಯಲ್ಲಿ 40 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. ಇವರ ಪೈಕಿ 21 ಮೃತರು ನೇರ ಪತ್ರಿಕಾ ಧರ್ಮವನ್ನೇ ಪಾಲಿಸುತ್ತಿದ್ದವರಾಗಿದ್ದಾರೆ.
2010ರ ನಂತರ ದಾಖಲಾಗಿರುವ ಪತ್ರಕರ್ತರ ಹತ್ಯೆಯ 30 ಪ್ರಕರಣಗಳಲ್ಲಿ ಮೂರರಲ್ಲಿ ಮಾತ್ರವೇ ಶಿಕ್ಷೆಯಾಗಿದೆ. 2014ರ ನಂತರ ಯಾವುದೇ ಶಿಕ್ಷೆಯಾಗಿಲ್ಲ. ಒಂದು ಅಧ್ಯಯನದ ಪ್ರಕಾರ 2014ರ ನಂತರ 19 ಮಹಿಳಾ ಪತ್ರಕರ್ತರು ಹಲ್ಲೆಗೊಳಗಾಗಿದ್ದಾರೆ. ಮಹಿಳಾ ಆಯೋಗಕ್ಕಾಗಲೀ, ಸಚಿವಾಲಯಕ್ಕಾಗಲೀ ಇದು ಗಂಭೀರ ವಿಚಾರ ಎನಿಸಿಯೇ ಇಲ್ಲ.
ಕಳೆದ ಏಳು ವರ್ಷಗಳಲ್ಲಿ ಮಾಧ್ಯಮ ವಲಯದಲ್ಲಿ ಸೃಷ್ಟಿಯಾಗಿರುವ ಧೃವೀಕರಣವೂ ಈ ನಿಷ್ಕ್ರಿಯತೆಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳ, ನಾಯಕರ ಮತ್ತು ಅಧಿಕಾರ ಕೇಂದ್ರಕ್ಕೆ ನಿಕಟ ಸಂಪರ್ಕ ಹೊಂದಿರುವವರ ಮಾಲಿಕತ್ವದಲ್ಲಿರುವ ಸುದ್ದಿ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಪತ್ರಕರ್ತರ ಮೇಲಿನ ಧಾಳಿಗಳು ರಾಜಕೀಯ ಲೆಕ್ಕಾಚಾರಗಳಾಗಿ ಮಾತ್ರವೇ ಕಾಣುತ್ತದೆ.
“ ಸುದ್ದಿಯ ಸಂಸ್ಕರಣ ಮತ್ತು ಅಭಿಪ್ರಾಯ ಉತ್ಪಾದನೆ ”ಯ ಕಾರ್ಖಾನೆಗಳಂತೆ ಕಾರ್ಯ ನಿರ್ವಹಿಸುತ್ತಿರುವ ಬಹುಪಾಲು ಸುದ್ದಿಮನೆಗಳು ಮತ್ತು ಪತ್ರಿಕೆಗಳು ತಮ್ಮ ಪತ್ರಿಕೋದ್ಯಮದ ಸಂಹಿತೆಗಳಿಗಿಂತಲೂ, ತಾವು ಆಶ್ರಯಿಸುವ ರಾಜಕೀಯ ಅಧಿಕಾರ ಕೇಂದ್ರಗಳ ಸಂಹಿತೆಗಳನ್ನು ಹೆಚ್ಚು ನಿಷ್ಠೆಯಿಂದ ಪಾಲಿಸುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಕರ್ನಾಟಕದ ಗೌರಿ ಲಂಕೇಶ್, ಶ್ರೀನಗರದ ಶೂಜತ್ ಬುಖಾರಿ, ದೂರದರ್ಶನದ ಛಾಯಾಗ್ರಾಹಕ ಅಚ್ಯುತಾನಂದಸಾಹು (ಮಾವೋವಾದಿಗಳ ಗುಂಡೇಟಿಗೆ ಬಲಿಯಾದ್ದರು), ಈ ಮೂರು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ರಾಜಕೀಯ ಅಕ್ರಮಗಳ ವಿರುದ್ಧ ಮತ್ತು ಭೂಮಾಫಿಯಾ, ಜಲ ಮಾಫಿಯಾ, ಹೆಂಡದ ದೊರೆಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪತ್ರಕರ್ತರೇ ಧಾಳಿಗೊಳಗಾಗಿದ್ದಾರೆ. ಈ ವಿಚಾರದಲ್ಲಿ ಮಾತ್ರ ನಮ್ಮ ದೇಶ ಅಪ್ಪಟ ಜಾತ್ಯತೀತ.
2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗಳ ಹಿನ್ನೆಲೆಯಲ್ಲಿ 14 ಪತ್ರಕರ್ತರ ವಿರುದ್ಧ ದೆಹಲಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಎಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿರುವುದು ಕಾಕತಾಳೀಯವೇನಲ್ಲ. ಇದೇ ಸಂದರ್ಭದಲ್ಲಿ ಸಾರ್ವಜನಿಕವಾಗಿಯೇ ಪಿಸ್ತೂಲು ತೋರಿಸಿದ ವ್ಯಕ್ತಿ ಸರ್ವ ಸ್ವತಂತ್ರನಾಗಿದ್ದರೆ, “ ಗೋಲಿ ಮಾರೋ ಸಾಲೋಂಕೋ ” ಎಂದು ಮುಕ್ತವಾಗಿ ಕರೆ ನೀಡಿದ ವ್ಯಕ್ತಿ ಸಾಂವಿಧಾನಿಕ ರಕ್ಷಣೆ ಪಡೆದಿದ್ದಾರೆ. ಇಷ್ಟರ ನಡುವೆ ಕಳೆದ ಏಳು ವರ್ಷಗಳಲ್ಲಿ ದೇಶಾದ್ಯಂತ 200 ಮಾಹಿತಿ ಹಕ್ಕು ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಈ ಕಾರ್ಯಕರ್ತರು ಯಾವುದೇ ಮಾಧ್ಯಮ ಸಮೂಹಕ್ಕೆ ಸೇರದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರಿಂದ ಬಹುಶಃ ಗಣನೆಗೇ ಬರುವುದಿಲ್ಲ ಎನಿಸುತ್ತದೆ.
ಮಾಧ್ಯಮ ವಲಯದ ಈ ಬಂಧುಗಳ ಹತ್ಯೆಗಳಿಗೆ ಮತ್ತು ಅವರ ಮೇಲೆ ನಿರಂತರವಾಗಿ ನಡೆಯುತ್ತಿರುವ ಧಾಳಿಗಳ ಬಗ್ಗೆ ಮಾಧ್ಯಮ ಸಮೂಹವೇ ಮೌನವಾಗಿರುವುದನ್ನು ಗಮನಿಸಿದರೆ, ಈ ದೇಶದ ಅಧಿಕಾರ ರಾಜಕಾರಣ ಮತ್ತು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳು ಮಾಧ್ಯಮ ವಲಯದ ಮೇಲೆ ಹೇಗೆ ನಿಯಂತ್ರಣ ಸಾಧಿಸಿವೆ ಎನ್ನುವುದು ಸ್ಪಷ್ಟವಾಗುತ್ತದೆ.
ಕೋವಿದ್ ಸಾವುಗಳ ಬಗ್ಗೆ ಮತ್ತು ಸರ್ಕಾರ ಕೋವಿದ್ ಸಾವುಗಳನ್ನು ಬಚ್ಚಿಡುತ್ತಿರುವುದನ್ನು ಸವಿಸ್ತಾರವಾಗಿ ವರದಿ ಮಾಡಿದ ದೈನಿಕ್ ಭಾಸ್ಕರ್ ಪತ್ರಿಕಾ ಸಮೂಹ ಈಗ ಆದಾಯ ತೆರಿಗೆ ಧಾಳಿಗೆ ಒಳಗಾಗಿದೆ. 2014ರಲ್ಲಿ ನರೇಂದ್ರ ಮೋದಿಯವರನ್ನು ವೈಭವೀಕರಿಸಿದಾಗ ಪ್ರಾಮಾಣಿಕವಾಗಿ ಕಂಡುಬಂದಿದ್ದ ಈ ಪತ್ರಿಕೆ ಈಗ ಪ್ರತಿರೋಧದ ಧ್ವನಿಯಾಗಿ ಶಿಕ್ಷೆಗೊಳಗಾಗುತ್ತಿದೆ. ಕರ್ನಾಟಕದಲ್ಲಿ ಪವರ್ ಟಿವಿ ವಾಹಿನಿಯ ಪ್ರಕರಣವನ್ನೂ ಇಲ್ಲಿ ಸ್ಮರಿಸಬಹುದು.
ಸ್ವತಂತ್ರ ಮಾಧ್ಯಮದ ಪರಿಕಲ್ಪನೆಯನ್ನೇ ಬದಿಗೊತ್ತಿ ಈ ರೀತಿಯ ರಾಜಕೀಯ ಧೃವೀಕರಣಕ್ಕೊಳಗಾಗಿರುವುದರಿಂದಲೇ ಮಾಧ್ಯಮ ವಲಯ ಇಂದು ಅತಿ ಹೆಚ್ಚು ಆಕ್ರಮಣಗಳನ್ನು ಎದುರಿಸುತ್ತಿದೆ. ಇದರ ಹೊರೆಯನ್ನು ಪತ್ರಕರ್ತರು ಹೊರುತ್ತಿದ್ದಾರೆ. ಆಳುವ ವರ್ಗಗಳ ಪರ, ಕಾರ್ಪೋರೇಟ್ ಪರ , ಭೂಮಾಫಿಯಾ ಮತ್ತಿತರ ಅಕ್ರಮ ಸಂತಾನಗಳ ಪರ ಇರುವ ಶಕ್ತಿಗಳು ಪ್ರಾಮಾಣಿಕ ವರದಿಗಾರರನ್ನು, ಮಾಹಿತಿ ಹಕ್ಕು ಕಾರ್ಯಕರ್ತರನ್ನು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿ ತಮ್ಮ ಅಕ್ರಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿವೆ. #ಆತ್ಮನಿರ್ಭರ ಭಾರತದಲ್ಲಿ ಇಂತಹ ಶಕ್ತಿಗಳಿಗೆ ಹೆಚ್ಚು ನಿರ್ಭರವಾಗುತ್ತಿವೆ. ಪ್ರಾಮಾಣಿಕತೆ ದುರ್ಭರವಾಗುತ್ತಿವೆ. ಮತಾಂಧತೆ, ಜಾತಿ ದ್ವೇಷ ಮತ್ತು ಕೋಮುವಾದದ ಛಾಯೆ ಸಮಾಜದ ಮೇಲೆ ದಟ್ಟವಾಗಿ ಆವರಿಸುತ್ತಿರುವಂತೆಯೇ, ಈ ಅನ್ಯಾಯಗಳನ್ನು ಪ್ರಶ್ನಿಸುವ ವ್ಯವಧಾನವನ್ನೂ ನಮ್ಮ ಸುತ್ತಲಿನ ಸಮಾಜ ಕಳೆದುಕೊಳ್ಳುತ್ತಿದೆ.
ಈ ಕಗ್ಗೊಲೆಗಳ ವಿರುದ್ಧ, ರಾಜಕೀಯ ಪ್ರೇರಿತ, ದ್ವೇಷಪೂರಿತ, ಜಾತಿ ಪ್ರೇರಿತ ಹತ್ಯೆಗಳ ವಿರುದ್ಧ ನಾವು ಧ್ವನಿ ಎತ್ತಿ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲಿ ಇಂದು ಡಾನಿಷ್ ಸಿದ್ದಿಖಿ ಅನಾಥ ಶವ ಆಗುತ್ತಿರಲಿಲ್ಲ. ಸುಶಿಕ್ಷಿತ ಎಂದು ಬೆನ್ನುತಟ್ಟಿಕೊಳ್ಳುವ ದೇಶದ ಬೃಹತ್ ಬೌದ್ಧಿಕ ವಲಯ ಇಂದು ಈ ನಿಷ್ಕ್ರಿಯತೆಯಿಂದ ಬಳಲುತ್ತಿದೆ. ಇದು ವಿಚ್ಚಿದ್ರಕಾರಿ ಶಕ್ತಿಗಳ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ. ದುರಂತ ಎಂದರೆ ಪತ್ರಿಕಾ ಧರ್ಮ ಅಥವಾ ಮಾಧ್ಯಮ ಸಂಹಿತೆಯನ್ನು ಪಾಲಿಸಬೇಕಾದ ನಮ್ಮ ಸುದ್ದಿಮನೆಗಳೂ ತಮ್ಮ ನೈತಿಕ ಹೊಣೆಗಾರಿಕೆಯಿಂದ ವಿಮುಖವಾಗಿವೆ. ಡಾನಿಷ್ ಹತ್ಯೆಯನ್ನು ರಂಜನೀಯವಾಗಿ ಬಿತ್ತರಿಸುವ ಸುದ್ದಿಮನೆಗಳ ನಿರೂಪಕರಿಗೆ ನಮ್ಮ ನೆಲದಲ್ಲೇ ಅನಾಥರಾಗಿ ಮಡಿದ 200 ಪತ್ರಕರ್ತರ ಸಾವು ಗಣನೆಗೇ ಬರುವುದಿಲ್ಲ. ಮಾಧ್ಯಮ ಲೋಕದ ಈ ನಿರ್ದಯಿ ನಿಷ್ಕ್ರಿಯತೆ ಮತ್ತು ವಂದಿಮಾಗಧ ಧೋರಣೆಯೇ ಡಾನಿಷ್ ಸಿದ್ದಿಖಿ ಅಂತಹ ಅದ್ಭುತ ಪ್ರತಿಭೆಗಳಿಗೆ ಮಾರಕವಾಗುತ್ತದೆ.
ಜಾತೀಯತೆ, ಮತಾಂಧತೆ ಮತ್ತು ಹುಸಿ ದೇಶಪ್ರೇಮದ ಗುಂಗಿನಲ್ಲಿ ಬಹುಪಾಲು ಸುದ್ದಿಮನೆಗಳು, ಮಾಧ್ಯಮಗಳು ತಮ್ಮ ಸ್ವ ಪ್ರಜ್ಞೆಯನ್ನು ಮಾರಿಕೊಂಡಿವೆ, ಬಹಳಷ್ಟು ಮಾಧ್ಯಮ ಬಂಧುಗಳು ತಮ್ಮ ವಿವೇಕವನ್ನು ಒತ್ತೆ ಇಟ್ಟಿದ್ದಾರೆ, ತಮ್ಮ ವಿವೇಚನೆಯನ್ನು ಕಳೆದುಕೊಂಡಿದ್ದಾರೆ, ಸ್ವಾಮಿನಿಷ್ಠೆಗೆ ಬದ್ಧರಾಗಿ ವೃತ್ತಿನಿಷ್ಠೆಯನ್ನು ಕಳೆದುಕೊಂಡಿದ್ದಾರೆ. ಹಾಗಾಗಿಯೇ ಅಸಹಿಷ್ಣುತೆಯನ್ನೂ ಸಹ ಸಹನೀಯವಾಗಿಸುತ್ತಿದ್ದಾರೆ. ಆದರೆ ಈ ಪಾಪಪ್ರಜ್ಞೆ ಸಾರ್ವಜನಿಕರನ್ನಾದರೂ ಕಾಡುವಂತಾದರೆ, ಆಫ್ಘಾನ್ ನೆಲದಲ್ಲಿ ಉಗ್ರಗಾಮಿಗಳ ಧಾಳಿಗೆ ಬಲಿಯಾದ ಡಾನಿಷ್ ಸಿದ್ದಿಖಿಗೆ ಶ್ರದ್ಧಾಂಜಲಿ ಅರ್ಪಿಸುವ ಅರ್ಹತೆಯನ್ನಾದರೂ ಪಡೆಯಬಹುದೇನೋ !!!
ಸುದ್ದಿದಿನ.ಕಾಂ|ವಾಟ್ಸಾಪ್|9980346243