ನೆಲದನಿ

‘ಬುರ್ರವೀಣಾ’ ವಾದ್ಯ ಸಂಗೀತ ಕಲಾಪ್ರಕಾರದ ಅಪ್ರತಿಮ ಕಲಾವಿದ ದಾಸರಿ ಕೊಂಡಪ್ಪ..!

Published

on

ಪ್ರೀತಿಯ ಬಂಧುಗಳೇ..,

ಬುರ್ರವೀಣಾ ವಾದ್ಯ ಸಂಗೀತದ ಈ ವಿಡಿಯೋವನ್ನು ತಪ್ಪದೇ ನೋಡಿ. ಜಾನಪದ ವಾದ್ಯ ಸಂಗೀತ ಮತ್ತು ಸಿರಿಕಂಠದ ಹಾಡುಗಾರಿಕೆಯನ್ನು ಆಲಿಸಬೇಕಾಗಿ ತಮ್ಮನ್ನು ಕೋರುತ್ತೇನೆ.

ಮಾಲದಾಸರಿ ಎಂಬ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಬುರ್ರವೀಣಾ ವಾದ್ಯ ಸಂಗೀತ ಕಲಾಪ್ರಕಾರದ ಅಪ್ರತಿಮ ಕಲಾವಿದ ದಾಸರಿ ಕೊಂಡಪ್ಪ. ಬುರ್ರವೀಣೆಯನ್ನು ಭೂಮಿವೀಣೆ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. ಆಂಧ್ರಪ್ರದೇಶದ ತೆಂಗಾಣಕ್ಕೆ ಸೇರಿದ ದಾಸರಿ ಕೊಂಡಪ್ಪ ಎಂಬ ಈ ಕಲಾವಿದ ಬುರ್ರವೀಣಾ ವಾದ್ಯ ಸಂಗೀತ ಕಲಾಪ್ರಕಾರದ ಕೊನೆಯ ಕೊಂಡಿ.

ಮಾಲದಾಸರಿ ಅಥವಾ ಹೊಲಯದಾಸರಿ ಎಂಬುವ ಅಲೆಮಾರಿ ಸಮುದಾಯದವರು ತಮ್ಮನ್ನು, ಅಸ್ಪೃಶ್ಯತೆಯ ಸಾಮಾಜಿಕ ಶೋಷಣೆಗೆ ಗುರಿಯಾಗಿರುವ ಸಮಾಜದ ಮುಖ್ಯವಾಹಿನಿಯ ಹೊಲಯ (ಛಲವಾದಿ) ಸಮುದಾಯದ ಉಪ ಜಾತಿಯಾಗಿಯೂ, ಹೊಲಯರ ಹಳೆಮಕ್ಕಳಾಗಿಯೂ ಗುರುತಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಮತ್ತು ನಂಜಯ್ಯಗಾರ್ಲಪಲ್ಲಿ ಗ್ರಾಮಗಳಲ್ಲಿ… ಸೀಮಾಂಧ್ರದ ಗಡಿ ಭಾಗದಲ್ಲಿ ಮಾಲದಾಸರಿಯವರು ಚದುರಿದಂತೆ ನೆಲೆಸಿದ್ದಾರೆ.

ಇಂದಿಗೂ ಇಂತಹ ಜಾನಪದ ಕಲೆಗಳು ಉಳಿದಿರುವುದು ಸಮಾಜದ ಅಂಚಿನಲ್ಲಿರುವ ದಾಸರಿ ಕೊಂಡಪ್ಪನಂತಹ ಅನಕ್ಷರಸ್ತ ಕಲಾವಿದರಲ್ಲಿಯೇ ಅನ್ನಿಸುತ್ತಿದೆ. ಹರಿದಾಸ ಕವಿಗಳ ಕೀರ್ತನೆಗಳನ್ನು ಯಾವುದೇ ಹೊತ್ತಿಗೆಗಳ ನೆರವಿಲ್ಲದೆ ಸುಶ್ರಾವ್ಯವಾಗಿ ಹಾಡುವ ಇಂತಹ ಅಪರೂಪದ ಕೊಂಡಿಗಳು ಕಳಚಿ ಬಿದ್ದು ಮಣ್ಣಿನ ಪದರದಲ್ಲಿ ಮರೆಯಾದವೆಂದರೆ ಅವರು ತಲೆಮಾರುಗಳಿಂದ ಪೋಷಿಸಿಕೊಂಡು ಬಂದ ಕಲೆಗಳೂ ಕಾಲದ ಪರದೆಯ ಹಿಂದೆ ಕಾಣದಂತೆ ಮರೆಯಾಗಿ ಹೋಗಿಬಿಡುತ್ತವೆ,

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version