ದಿನದ ಸುದ್ದಿ

ದಾವಣಗೆರೆ | ಕೋವಿಡ್ ಯುದ್ಧದಂತೆ, ಸೇನಾನಿಗಳಂತೆ ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಿ; ಲೋಪವೆಸಗಿದರೆ ಕಠಿಣ ಕ್ರಮ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

Published

on

ಸುದ್ದಿದಿನ,ದಾವಣಗೆರೆ: ಕೋವಿಡ್ ಎಂಬುದೊಂದು ಯುದ್ದದಂತೆ ಇದ್ದು ಇದನ್ನು ಮೆಟ್ಟಿ ನಿಲ್ಲುವಲ್ಲಿ ನಾವೆಲ್ಲ ಸೇನಾನಿಗಳಂತೆ ಕೆಲಸ ಮಾಡಬೇಕಿದೆ. ಬೆಳಗಿನಿಂದ ಸಂಜೆತನಕ ಇದೊಂದು ಕರ್ತವ್ಯವೆಂಬಂತೆ ಅಲ್ಲ, ಬದಲಾಗಿ ಯುದ್ದೋಪಾದಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ಯಾರೇ ಕರ್ತವ್ಯಲೋಪವಿಸಗಿದರೂ ಅವರನ್ನು ಕೇವಲ ಸಸ್ಪೆಂಡ್ ಅಲ್ಲ, ಬದಲಾಗಿ ವಿಪತ್ತು ನಿರ್ವಹಣೆ ಕಾಯ್ದೆಯಡಿ ಶಿಕ್ಷೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಧಿಕಾರಿ, ವೈದ್ಯರು, ಸಿಬ್ಬಂದಿ ಯಾರೇ ಕೂಡ ತಮ್ಮ ಕರ್ತವ್ಯ ಲೋಪವೆಸಗಿದರೆ ಸುಮ್ಮನೆ ಇರುವುದಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 6 ಸಾವು ಸಂಭವಿಸಿದೆ. ಇದರಲ್ಲಿ ಎರಡು ಪ್ರಕರಣಗಳ ಪೈಕಿ ವೈದ್ಯರು ಕೈಮೀರಿ ಪ್ರಯತ್ನಪಟ್ಟರೂ ಉಳಿಸಿಕೊಳ್ಳಲು ಆಗಲಿಲ್ಲ.

ಪ್ರಯತ್ನ ಪಟ್ಟೂ ಜೀವ ಹೋದರೆ ಏನು ಮಾಡಲು ಆಗುವುದಿಲ್ಲ. ಆದರೆ ಕೋವಿಡ್ ರೋಗಿಯನ್ನು ಗುರುತಿಸುವಲ್ಲಿ, ಮತ್ತು ಇಂತಹ ರೋಗಿಯನ್ನು ಕೋವಿಡ್ ನಿಗದಿತ ಆಸ್ಪತ್ರೆಗೆ ತಲುಪಿಸುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾಸ್ಪತ್ರೆ ವೈದ್ಯರವರೆಗೆ ಕರ್ತವ್ಯ ಇರುತ್ತದೆ. ಇಲ್ಲಿ ಕರ್ತವ್ಯಲೋಪವಾದರೆ ಸಹಿಸಲು ಆಗುವುದಿಲ್ಲ. ಕರ್ತವ್ಯಲೋಪವಿಸಗಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ವಿರುದ್ದ ಎಲ್ಲ ಅಧಿಕಾರಿ/ನೌಕರರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದೀರಿ. ಆದರೆ ಮೊನ್ನೆ ಜಾಲಿನಗರ ಮತ್ತು ಹರಿಹರ ತಾಲ್ಲೂಕಿನ ದೇವರಬೆಳೆಕೆರೆ ವೃದ್ದರನ್ನು ಉಳಿಸಿಕೊಳ್ಳುವಲ್ಲಿ ಲೋಪವಾಗಿದೆ. ಜಾಲಿನಗರ ಕಂಟೈನ್‍ಮೆಂಟ್ ಝೋನ್‍ನಲ್ಲಿ ಸಕ್ರಿಯ ಸರ್ವೇಕ್ಷಣೆ ನಡೆಯುತ್ತಿದೆ.

ಆದರೂ ಈ ವೃದ್ದೆ ಅಸ್ವಸ್ಥರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹಾಗೂ ದೇವರಬೆಳೆಕೆರೆಯ 83 ವರ್ಷದ ವೃದ್ದೆಯನ್ನು ಆ ಗ್ರಾಮದ ಪಿಹೆಚ್‍ಸಿ ಯವರು ಸಿ.ಜಿ.ಆಸ್ಪತ್ರೆಗೆ ಹೋಗಿರೆಂದು ತಿಳಿಸಿದ್ದಾರೆ. ಆದರೆ ಅವರು ಸಿ.ಜಿ ಆಸ್ಪತ್ರೆ ತಲುಪಿದ್ದಾರೆಂಬ ಬಗ್ಗೆ ಫಾಲೊ ಅಪ್ ಮಾಡಲಿಲ್ಲ.

ಒಬ್ಬ ಸಂಶಯಾಸ್ಪದ ಕೋವಿಡ್ ರೋಗಿ ಗಮನಕ್ಕೆ ಬಂದರೆ ಅವರನ್ನು ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಗೆ ತಲುಪಿಸುವವರೆಗೆ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಗಳ/ಆಶಾ ಕಾರ್ಯಕರ್ತರ ಕರ್ತವ್ಯವಿರುತ್ತದೆ.

ಇಲ್ಲಿ ಲೋಪವಾದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಈ ರೀತಿ ಕಠಿಣವಾಗಿ ಕ್ರಮ ಕೈಗೊಳ್ಳುವ ಹಂತಕ್ಕೆ ಹೋಗದೇ ಅತ್ಯಂತ ಜವಾಬ್ದಾರಿಯಿಂದ ಮುತುವರ್ಜಿಯಿಂದ ಗ್ರಾಸ್‍ರೂಟ್ ಮಟ್ಟದಿಂದ ಕೆಲಸ ಆಗಬೇಕೆಂದು ಮನವಿ ಜೊತೆಗೆ ಆದೇಶಿಸುತ್ತಿದ್ದೇನೆ ಎಂದರು.

ಸರ್ಕಾರದ ಮಟ್ಟದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅತ್ಯಂತ ಕಟ್ಟುನಿಟ್ಟಾಗಿ ಪ್ರತಿದಿನ ಪ್ರಗತಿ ಪರಿಶೀಲಿಸುತ್ತಾರೆ. ಅದರಲ್ಲೂ ಸಾವಿನ ಕುರಿತಾಗಿ ಕಟ್ಟುನಿಟ್ಟಾಗಿ ವಿಚಾರಣೆ ನಡೆಸುತ್ತಾರೆ. ಅವರಿಗೆ ನಾನು ಉತ್ತರದಾಯಿತ್ವನಾಗಿರುತ್ತೇನೆ.

ಆದ್ದರಿಂದ ದುರ್ಬಲ ವರ್ಗವೆಂದು ಪರಿಗಣಿಸಲ್ಪಡುವ ವಯೋವೃದ್ದರು, ಮಕ್ಕಳು ಸೇರಿದಂತೆ ಇತರೆ ಕಾಯಿಲೆಗಳಾದ ಹೃದಯ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ, ಇನ್ನಿತರೆ ಸಮಸ್ಯೆಗಳಿರುವ ದುರ್ಬಲ ವರ್ಗದ ಸರ್ವೇ ಅತ್ಯಂತ ಪರಿಣಾಮಕಾರಿಯಾಗಿ ನಡೆದು ಇವರ ಪರೀಕ್ಷೆ ನಡೆಯಬೇಕು. ಯಾವುದೇ ದುರ್ಬಲ ವರ್ಗದ ರೋಗಿಗೂ ಕೋವಿಡ್‍ನಿಂದ ಸಾವು ಸಂಭವಿಸದಂತೆ ಕಟ್ಟೆಚ್ಚರ ವಹಿಸಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಎಎಸ್‍ಪಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಇತರೆ ಅಧಿಕಾರಿಗಳು ಇದ್ದರು.

ಸುದ್ದಿದಿನ‌‌‌.ಕಾಂ|ವಾಟ್ಸಾಪ್|9980346243

Trending

Exit mobile version