ದಿನದ ಸುದ್ದಿ

ದಾವಣಗೆರೆ | ವಿಕಲಚೇತನರ ಬೇಡಿಕೆ ಆಧಾರದ ಸಮೀಕ್ಷೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ವಿಕಲಚೇತನರಿಗೆ ಕೇವಲ ವಾಹನ, ಸಾಧನ ಸಲಕರಣೆ ನೀಡುತ್ತಿರುವುದು ಸರಿಯಲ್ಲ. ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ನೆರವಿನೊಂದಿಗೆ, ಪ್ರತಿ ಗ್ರಾಮಗಳಲ್ಲಿ ವಿಕಲಚೇತನರ ಬೇಡಿಕೆಗಳು, ವಸತಿ ಸೌಕರ್ಯ, ವೃತ್ತಿ ತರಬೇತಿ, ಕೌಶಲ್ಯ ಮುಂತಾದ ಬೇಡಿಕೆ ಆಧಾರದ ಸಮೀಕ್ಷೆ ಕೈಗೊಂಡು, ವರದಿ ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ವರದಿಯನ್ನು ಕ್ರೋಢೀಕರಿಸಿ, ಕ್ರಿಯಾ ಯೋಜನೆ ರೂಪಿಸಬೇಕು. ವಿಕಲಚೇತನರಿಗೆ ಆದಾಯ ತರುವಂತಹ ವೃತ್ತಿ ಆಧಾರಿತ ತರಬೇತಿ ಕೊಡಿಸುವುದು, ವಸತಿ ರಹಿತರಿಗೆ ಮನೆ ಒದಗಿಸುವುದು, ಸಾಲ ಸೌಲಭ್ಯ ನೀಡಿಕೆಗೆ ಕ್ರಮ ಕೈಗೊಳ್ಳಬೇಕು.

ಸರ್ಕಾರಿ ಸೌಲಭ್ಯವನ್ನು ಪದೇ ಪದೇ ಒಂದೇ ಫಲಾನುಭವಿಗೆ ನೀಡುವಂತಾಗಬಾರದು. ಕಳೆದ 10 ವರ್ಷಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿ ಇಲಾಖೆಯಲ್ಲಿ ಲಭ್ಯವಿರಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಅವರಿಗೆ ಸೂಚನೆ ನೀಡಿದರು.

ಇದನ್ನೂ ಓದಿ | ದಾವಣಗೆರೆ | 5ನೇ ತರಗತಿವರೆಗಿನ ಶಾಲೆಗೆ ಅನುಮತಿ ಇಲ್ಲ : ಎಸ್‍ಎಸ್‍ಎಲ್‍ಸಿ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೊಂದಾಯಿಸಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ, ಅಧಿಕಾರಿಗಳು ಕಚೇರಿಯಲ್ಲಿ ಸಾರ್ವಜನಿಕರಿಗೆ ದೊರಕುತ್ತಿಲ್ಲ, ಇದ್ದರೂ, ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿಲ್ಲ, ಅಹವಾಲಗಳನ್ನು ಆಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಅಧಿಕಾರಿಗಳಿಗೆ ಪ್ರತಿ ಸೋಮವಾರ ಯಾವುದೇ ಸಭೆ ನಡೆಸುವುದಿಲ್ಲ, ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯರಿರಬೇಕು. ಅವರ ಮನವಿಗೆ ಸ್ಪಂದಿಸಬೇಕು. ವಿನಾಕಾರಣ ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಪ್ರಸಕ್ತ ವರ್ಷದಲ್ಲಿ ಆಯಾ ಇಲಾಖೆಯವರು ಯೋಜನೆ, ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ವ್ಯಪಗತವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯಕ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರ ಶೇಖರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version