ದಿನದ ಸುದ್ದಿ

ದಾವಣಗೆರೆ | ಸಮಾಜ ಕಲ್ಯಾಣ ಇಲಾಖೆ : ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಅನುಸೂಚಿತ ಜಾತಿ ಮತ್ತು ಬುಡಕಟ್ಟು ನಿಯಮ (1995) 17ರ ಪ್ರಕಾರ ಈ ಹಿಂದೆ ರಚಿಸಲಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅವಧಿ ಮುಕ್ತಾಯವಾಗಿದ್ದು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಸಮಿತಿಯ ಪುನರ್ ರಚನೆ ಮಾಡಲು ಉದ್ದೇಶಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅನುಸೂಚಿತ ಜಾತಿ ಮತ್ತು ಬುಡಕಟ್ಟು ನಿಯಮ (1995) 17ರ ಪ್ರಕಾರ ದೌರ್ಜನ್ಯಕ್ಕೆ ಒಳಗಾದವರಿಗೆ ಒದಗಿಸಲಾದ ಪರಿಹಾರವನ್ನು ಹಾಗೂ ಪುನರ್‍ವಸತಿ ಸೌಕರ್ಯಗಳನ್ನು ಮತ್ತು ಅದಕ್ಕೆ ಸಂಬಂದಿಸಿದ ಇತರೆ ವಿಷಯಗಳನ್ನು ಅಧಿನಿಯಮ ಮೇರೆಗಿನ ಮೊಕದ್ದಮೆಗಳ ಪ್ರಾಸಿಕ್ಯೂಷನ್ ಉಪಬಂಧಗಳನ್ನು ಅನುಷ್ಠಾನಗೊಳಿಸುವುದಕ್ಕೆ ಜವಾಬ್ದಾರರಾದ ವಿವಿಧ ಅಧಿಕಾರಿಗಳ, ಏಜೆನ್ಸಿಗಳ ಪಾತ್ರವನ್ನು ಮತ್ತು ಜಿಲ್ಲಾಡಳಿತವು ಸ್ವೀಕರಿಸಿದ ವಿವಿಧ ವರದಿಗಳನ್ನು ಪುನರವಲೋಕಿಸಲು ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ರಚಿಸಲಾಗಿತ್ತು.

ಜಿಲ್ಲೆಯಲ್ಲಿ ಈ ಹಿಂದೆ ರಚಿಸಲಾದ ಸಮಿತಿಯ ಅವಧಿಯು ಮುಕ್ತಾಯಗೊಂಡಿದ್ದು ಸಮಿತಿಯನ್ನು ಪುನರ್‍ರಚಿಸಲು ಸಮಿತಿಯ ಅಧಿಕಾರೇತರ ಸದಸ್ಯರನ್ನಾಗಿ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳಿಗೆ ಸೇರಿದ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ 5 ಜನ ಹಾಗೂ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಅಲ್ಲದ 3 ಜನ ಸದಸ್ಯರನ್ನು ಆಯ್ಕೆ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಮಾ. 10 ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ | ದಾವಣಗೆರೆ | ಅಶೋಕ ರೈಲ್ವೆ ಗೇಟ್ ಸಮಸ್ಯೆಗೆ ಪರಿಹಾರ : ಕಾಮಗಾರಿಗೆ ಶೀಘ್ರ ಚಾಲನೆ : ಸಂಸದ ಜಿ.ಎಂ ಸಿದ್ದೇಶ್ವರ್

ಅರ್ಜಿ ಸಲ್ಲಿಸುವವರು ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಬಗ್ಗೆ ಪಡೆದ ದೃಢೀಕರಣ ಪ್ರಮಾಣಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ವಿದ್ಯಾರ್ಹತೆ ದೃಢೀಕೃತ ಪ್ರಮಾಣಪತ್ರ, ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರದೇ ಇರುವುದಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯಿಂದ ಗಣಕೀಕೃತ ವರದಿ ಸಲ್ಲಿಸಬೇಕು.

ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನಾಂಗದ ಉನ್ನತಿಗಾಗಿ ಇರುವ ಸರ್ಕಾರದ ಯೋಜನೆಗಳ ಕಾಯ್ದೆಯ ಜ್ಞಾನವನ್ನು ಹೊಂದಿರಬೇಕು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಯಾವುದೇ ಸರ್ಕಾರಿ/ ಅರೆಸರ್ಕಾರಿ/ ಮಂಡಳಿ/ ನಿಗಮ/ ಇತರೆ ಸರ್ಕಾರಿ ನೌಕರರಾಗಿರಬಾರದು.

ಅರ್ಜಿಯನ್ನು ಮಾ. 10 ರೊಳಗೆ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version