ದಿನದ ಸುದ್ದಿ
ದಾವಣಗೆರೆ | ಕಾನೂನು ಮೀರಿ ನಡೆದರೆ ಶಿಸ್ತಿನ ಕ್ರಮ : ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ
ಸುದ್ದಿದಿನ,ದಾವಣಗೆರೆ:ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಚಟುವಟಿಕೆಗಳನ್ನು ನಡೆಸಬೇಕು. ಪರವಾನಗಿ ಇಲ್ಲಿದವರಿಗೆ ಪರವಾನಗಿ ಪಡೆಯಲು ಮಾರ್ಗದರ್ಶನ ನೀಡುವುದರೊಂದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಆದರೆ ಕಾನೂನು ಮೀರಿ ನಡೆದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಲುಗಣಿ ಮತ್ತು ಕ್ರಷರ್‍ಗಳಿಗೆ ಲೈಸೆನ್ಸ್ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮಾರ್ಗದರ್ಶನ ನೀಡುವರು. ಎಸ್‍ಪಿ ಹಾಗೂ ಡಿಸಿ ಕಚೇರಿಗಳ ಸಹಕಾರ ಕೂಡ ಇದ್ದು, ಆದಷ್ಟು ಬೇಗ ಮಾಲೀಕರು ಲೈಸೆನ್ಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಅನಧಿಕೃತ ಕ್ವಾರಿಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಂಡವೊಂದನ್ನು ರಚಿಸಿ, ಆ ವರದಿಯನ್ವಯ ಶಿಸ್ತಿನ ಕ್ರಮ ವಹಿಸಲಾಗುವುದು.
ಜಿಲ್ಲೆಯಲ್ಲಿ ಒಟ್ಟು 58 ಕ್ರಷರ್‍ಗಳಿವೆ. ಹಾಗೂ 78 ಕಲ್ಲುಗಣಿಗಳಿವೆ. 78 ಕ್ವಾರಿಗಳ ಪೈಕಿ 10 ಮಾತ್ರ ಬ್ಲಾಸ್ಟಿಂಗ್ ಲೈಸೆನ್ಸ್ ಪಡೆದಿದ್ದು, 18 ಪ್ರಗತಿಯಲ್ಲಿವೆ. 07 ನವೀಕರಣ ಪ್ರಕ್ರಿಯೆಯಲ್ಲಿದ್ದರೆ 7 ಮ್ಯಾನುವಲ್ ಮತ್ತು 36 ಕ್ವಾರಿಗಳಲ್ಲಿ ಕೆಲಸ ನಡೆಯುತ್ತಿಲ್ಲವೆಂದು ಗಣಿ ಇಲಾಖೆ ವರದಿ ನೀಡಿದೆ.
ಬ್ಲಾಸ್ಟಿಂಗ್ ಲೈಸೆನ್ಸ್ ಪಡೆದರೂ ಕೂಡ ಕ್ವಾರಿಗಳ ಚಟುವಟಿಕೆ ನಿಯಂತ್ರಿತ ಚಟುವಟಿಕೆಯಾಗಿದೆ. ಹಾಗೂ 2008 ರ ಸ್ಪೋಟಕ ನಿಯಮಾವಳಿಗಳ ಪ್ರಕಾರವೇ ಕ್ವಾರಿ ಕಾರ್ಯ ನಡೆಸಬೇಕು. ನಿಯಮವನ್ನು ಗಾಳಿಗೆ ತೂರುವ ಮನೋಭಾವ ಬಿಡಬೇಕು. ಅಭಿವೃದ್ದಿ ಜೊತೆಗೆ ನಿಯಮಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ಒಂದು ವಾರದೊಳಗೆ ವರದಿ ನೀಡಲು ಗಡವು
ಕ್ವಾರಿಗಳಿರುವ ವ್ಯಾಪ್ತಿಯ ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಆರ್‍ಐ ಮತ್ತು ವಿಎ ಸೇರಿದಂತೆ ತಂಡ ರಚಿಸಿ ಗಣಿ ಇಲಾಖೆಯ ವರದಿಯಲ್ಲಿರುವಂತೆ ಕ್ವಾರಿಗಳು ಕೆಲಸ ನಿರ್ವಹಿಸುತ್ತಿವೆಯೇ? ಮುಖ್ಯವಾಗಿ ಕೆಲಸ ನಿಲ್ಲಿಸಿರುವ(ಐಡಲ್) ಕ್ವಾರಿಗಳ ಸ್ಥಿತಿಗತಿ ಏನು ಎಂಬ ಬಗ್ಗೆ ಒಂದು ವಾರದೊಳಗೆ ನನಗೆ ವರದಿ ನೀಡಬೇಕು. ಈ ವರದಿಯನ್ನು ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು. ಒಂದು ಪಕ್ಷ ಅನಧಿಕೃತವಾಗಿ ಕ್ವಾರಿ ನಡೆಸುತ್ತಿದ್ದರೆ ಹಾಗೂ ಕಾಯ್ದೆಯನ್ವಯ ನಿಯಮಗಳನ್ನು ಅನುಸರಿಸದೇ ಕ್ವಾರಿ ನಡೆಸುತ್ತಿದ್ದರೆ ಅಂತಹ ಕ್ವಾರಿಗಳಿಗೆ ನೋಟಿಸ್ ನೀಡಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಪರಿಸರಾಧಿಕಾರಿಗಳು ಕ್ವಾರಿಗಳಿಗೆ ಭೇಟಿ ನೀಡಿ ಪರಿಸರ ಮಾಲಿನ್ಯ ನಿಯಂತ್ರಣಾ ಕ್ರಮ ಕೈಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243