ದಿನದ ಸುದ್ದಿ

ಗಾಜಿನ ಮನೆ ಸುತ್ತ ವಿವಾದ ಹುತ್ತ ; ಹೆಸರಿಡುವ ವಿವಾದ ಎಂದು ಅಂತ್ಯ..?

Published

on

ದಾವಣಗೆರೆ ಗಾಜಿನ ಮನೆ

ಸುದ್ದಿದಿನ,ದಾವಣಗೆರೆ : ಕುಂದವಾಡ ಕೆರೆ ಬಳಿ ನಿರ್ಮಿಸಿರುವ ಗಾಜಿನ ಮನೆಗೆ ಹೆಸರಿಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚಾಗ್ರಾಸವಾಗಿದ್ದು, ರಾಜಕಾರಣಿಗಳ ಹೆಸರಿನ ಬದಲು ‘ದಾವಣಗೆರೆ ಗಾಜಿನ ಮನೆ’ ಎಂದು ಹೆಸರಿಡುವಂತೆ ಸಲಹೆ, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈಚೆಗೆ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಗಾಜಿನ ಮನೆ ನಾಮಕರಣ ವಿವಾದ ಭಾರಿ ಚರ್ಚೆಗೆ ಕಾರಣವಾಯಿತು. ಬಿಜೆಪಿಯವರು ಮಾಜಿ ಸಂಸದ ದಿ. ಮಲ್ಲಿಕಾರ್ಜುನಪ್ಪ, ಕುಂದವಾಡ ಹಾಗೂ ಕಾಂಗ್ರೆಸ್‌ನವರು ಶಾಮನೂರು ಮತ್ತೆ ಕೆಲವರು ಜಿಲ್ಲೆಯ ನಿರ್ಮಾತೃ ದಿ. ಜೆ.ಎಚ್. ಪಟೇಲರ ಹೆಸರಿಡುವಂತೆ ಆಗ್ರಹಿಸಿದರು.

ಮಾಜಿ ಸಂಸದ ಮಲ್ಲಿಕಾರ್ಜುನಪ್ಪ ಹೆಸರಿಡುವುದಕ್ಕೆ ಕಾಂಗ್ರೆಸ್‌ನವರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಶಾಮನೂರು ಹೆಸರು ಯಾಕೆ ಬೇಕೆಂದು ಪ್ರಶ್ನಿಸಿದರು. ಗಾಜಿನ ಮನೆ ಹೆಸರಿಡುವ ವಿವಾದ ತೀವ್ರವಾಗಿದ್ದು, ಇದರಿಂದ ನಾಗರಿಕರು ಈ ಎರಡು ಹೆಸರು ಬೇಡ. ದಾವಣಗೆರೆ ಗಾಜಿನ ಮನೆ ಹೆಸರಿಡುವಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಾಗ್ರಾಸವಾಗುತ್ತಿದೆ.

ಗಾಜಿನ ಮನೆಗೆ ವಿವಿಧ ಹೆಸರುಗಳು ಸಲಹೆ

ಕುಂದವಾಡ ಕೆರೆ ಬಳಿ ತೋಟಗಾರಿಕೆ ಇಲಾಖೆ ನಿರ್ಮಿಸಿರುವ ಗಾಜಿನ ಮನೆಗೆ ವಿವಿಧ ಹೆಸರುಗಳು ಶಿಫಾರಸು ಆಗಿದ್ದು, ವಿವಾದಕ್ಕೆ ತಿರುಗಿದೆ. ಮಾಜಿ ಸಂಸದ ದಿ. ಜಿ. ಮಲ್ಲಿಕಾರ್ಜುನಪ್ಪ, ಶಾಮನೂರು, ಶಾಮನೂರು ಶಿವಶಂಕರಪ್ಪ, ಕುಂದುವಾಡ, ಜಿಲ್ಲೆಯ ನಿರ್ಮಾತೃ ದಿ. ಜೆ.ಎಚ್. ಪಟೇಲರ ಹೆಸರಿಡಲು ಸಲಹೆಗಳು ಬಂದಿವೆ. ಆದರೆ, ಈ ಹೆಸರುಗಳನ್ನು ಇಡಲು ಸರ್ವಸಮ್ಮತ ಒಪ್ಪಿಗೆ ಸಿಗುವುದು ಕಷ್ಟಕರವಾಗಿದೆ.

ದೇಶದ ಅತಿ ದೊಡ್ಡ ಗಾಜಿನ ಮನೆ

ದಾವಣಗೆರೆಯಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆಗೆ ದೇಶದಲ್ಲಿ ದೊಡ್ಡದು ಎಂಬ ಖ್ಯಾತಿ ಇದೆ. ಕುಂದವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಮನೆ ನಿರ್ಮಾಣವಾಗಿದೆ. ಇದು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಗಿಂತ ದೊಡ್ಡದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version