ದಿನದ ಸುದ್ದಿ
ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
ಮುಖ್ಯಾಂಶಗಳು
ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ
ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ
ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್
ಸುದ್ದಿದಿನ,ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಎದುರಿಸುತ್ತಿರುವವರು
ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.
ಕಚೇರಿಯಲ್ಲಿ ತಪಾಸಣೆ
ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243