ದಿನದ ಸುದ್ದಿ
ಮಳೆಗಾಲದಲ್ಲೂ ಮನೆಗೆ ತಲುಪುತ್ತಿಲ್ಲ ಕುಡಿಯಲು ನೀರು; ಪಾಲಿಕೆ ವಿರುದ್ಧ ದಿನೇಶ್ ಶೆಟ್ಟಿ ಆಕ್ರೋಶ
ಸುದ್ದಿದಿನ, ದಾವಣಗೆರೆ: ನಗರಪಾಲಿಕೆಯಿಂದ ಕುಡಿಯುವ ನೀರಿನ ಸರಬರಾಜನ್ನು ಎಂಟರಿಂದ ಹತ್ತು ದಿನಕ್ಕೆ ಪೂರೈಕೆ ಮಾಡುತ್ತಿದ್ದು, ನೀರಿನ ಸಮಸ್ಯೆಗೆ ಆಡಳಿತ ನಿರ್ಲಕ್ಷ ವಹಿಸಿದೆ ಎಂದು ಪಾಲಿಕೆಯ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ ಆರೋಪಿಸಿದ್ದಾರೆ.
ನೀರನ್ನು ಶುದ್ಧೀಕರಿಸದೇ ಅಶುದ್ಧವಾದ ನೀರನ್ನೇ ಸರಬರಾಜು ಮಾಡಲಾಗುತಿದ್ದು ಇದರಿಂದ ಸಾಕಷ್ಟು ರೋಗ-ರುಜಿನಗಳು ಉಲ್ಬಣಗೊಳಿಸುತ್ತವೆ ಎಂದು ತಿಳಿಸಿರುತ್ತಾರೆ.
ಈ ಹಿಂದೆ ನಗರಪಾಲಿಕೆಯ ನೀರನ್ನು ಕುದಿಸಿ ಆರಿಸಿ ಉಪಯೋಗಿಸಿ ಎಂಬ ಹೇಳಿಕೆಯನ್ನು ನೀಡಲಾಗುತ್ತಿತ್ತು ಆದರೆ ಈಗಿನ ಪಾಲಿಕೆಯ ಆಡಳಿತ ಸೌಜನ್ಯಕ್ಕಾದರೂ ಜನತೆಗೆ ಮಾಹಿತಿ ನೀಡದೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದರು.
ಕೋವಿಡ್ ನೆಪದಲ್ಲಿ ನಗರದಲ್ಲಿ ಮಹಾನಗರಪಾಲಿಕೆ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪೂರ ಸಂಪೂರ್ಣ ವಿಫಲವಾಗಿದ್ದು ಸೀಲ್ ಡೌನ್ ನೆಪದಲ್ಲಿ ಮನೆಯೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಸ್ವಚ್ಛತೆ ಇಲ್ಲದೇ ರೋಗರುಜಿನಗಳು ಹೆಚ್ಚಾಗಿದ್ದು, ಕರೋನಾ ಡೆಂಗ್ಯು , ಹೆಚ್ ,1, ಎನ್,1. ಮುಂತಾದ ರೋಗಗಳು ಹರಡಲು ಸಹ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ
ಪಾಲಿಕೆ ಆಡಳಿತ ನಡೆಸುವವರೇ ಆಗಲಿ ಅಧಿಕಾರಿಗಳಾಗಲಿ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಕರೋನ ನೆಪ ಒಡ್ಡಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಿನೇಶ್ ಅವರು ದೂರಿದ್ದಾರೆ.
ಜಿಲ್ಲಾಡಳಿತ ಕೂಡಲೇ ಮಹಾನಗರಪಾಲಿಕೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲುಸ ಸೂಕ್ತ ಕ್ರಮ ಕೈಗೊಳ್ಳಲು ಅದೇಶಿಸಬೇಕೆಂದು ಒತ್ತಾಯಿದ್ದಾರೆ.