ದಿನದ ಸುದ್ದಿ
ದಾವಣಗೆರೆ | ಅಕ್ರಮವಾಗಿ ಬೆಳ್ಳಿ ಗೆಜ್ಜೆ ತಂದಿದ್ದ ತಮಿಳುನಾಡಿನ ಇಬ್ಬರ ಬಂಧನ
ಸುದ್ದಿದಿನ,ದಾವಣಗೆರೆ: ಅಕ್ರಮವಾಗಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಸೇಲಂನ ಸೆಲ್ವಂ ಮತ್ತು ಬಾಲಾಜಿ ಬಂಧಿತ ಆರೋಪಿಗಳು. ತಮಿಳುನಾಡಿನ ಸೇಲಂ ನಿಂದ ಅನಧಿಕೃತವಾಗಿ 20 ಲಕ್ಷ ರೂಪಾಯಿ ಮೌಲ್ಯದ 102 ಕೆಜಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರನ್ನು ವಿಚಾರಣೆ ನಡೆಸಿದಾಗ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಗೆ ಕಳೆದ ಜುಲೈ 3 ರಂದು ಬಂದಿದ್ದಾರೆ. ಇಬ್ಬರ ಬಳಿಯೂ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇರಲಿಲ್ಲ. ಮಾರಾಟ ಮಾಡಲು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾವ ಕಾರಣದಿಂದ ಇಷ್ಟೊಂದು ಪ್ರಮಾಣದ ಬೆಳ್ಳಿ ತಂದಿದ್ದರು, ಕಳ್ಳತನ ಮಾಡಿ ಇಲ್ಲಿ ಮಾರಾಟ ಮಾಡಲು ಬಂದಿರಬಹುದಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಹಳೆಯ ಬೆಳ್ಳಿ ಖರೀದಿಸಿ ಪಾಲಿಷ್ ಮಾಡಿ ಮಾರಾಟಕ್ಕೇನಾದರೂ ತಂದಿರಬಹುದೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.ಕಳ್ಳತನ ಮಾಡಿಕೊಂಡು ಬಂದು ಕಡಿಮೆ ದರಕ್ಕೆ ಮಾರಾಟಕ್ಕೆ ಯತ್ನಿಸಿರಬಹುದು ಎಂದರು.
ದಾವಣಗೆರೆಯ ಚಿನ್ನ ಬೆಳ್ಳಿ ಮಾರಾಟಗಾರರ ಸಭೆ ನಡೆಸಿ ಬಿಲ್ ಇಲ್ಲದೇ ಇರುವ ಚಿನ್ನ ಬೆಳ್ಳಿ ಆಭರಣ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ. ಯಾವುದೇ ಬಿಲ್ ಇಲ್ಲದಿರುವ ಆಭರಣಗಳ ಖರೀದಿ ಮಾಡುವುದರಿಂದ ಕಳ್ಳರು ಸುಲಭವಾಗಿ ಕದ್ದ ಮಾಲು ಮಾರಾಟ ಮಾಡಬಹುದಾಗಿದೆ. ಹಾಗಾಗಿ ಬಿಲ್ ಇಲ್ಲದೆ ಖರೀದಿ ಮಾಡದಂತೆ ಹಲವಾರು ಸಭೆಯಲ್ಲಿ ತಿಳಿಸಲಾಗಿದೆ ಎಂದ ಅವರು, ಚಿನ್ನ, ಬೆಳ್ಳಿ ವ್ಯಾಪಾರಸ್ಥರು ಬುಲಿಯನ್ ಖಾತೆಯ ಮೂಲಕವೇ ಖರೀದಿ ಮಾಡಬೇಕು. ಅನಧಿಕೃತವಾಗಿ ಖರೀದಿ ಮಾಡುವಂತಿಲ್ಲ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243