ದಿನದ ಸುದ್ದಿ
ದಾವಣಗೆರೆ | 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ರೂ.12.7 ಕೋಟಿ ಪ್ರೋತ್ಸಾಹಧನ : ಸಂಸದ ಜಿ.ಎಂ.ಸಿದ್ದೇಶ್ವರ
ಸುದ್ದಿದಿನ, ದಾವಣಗೆರೆ : ಆಶಾ ಕಾರ್ಯಕರ್ತೆಯರು ತಮ್ಮ ಸಂಸಾರದ ಜಂಜಾಟ ತೊರೆದು ಕೊರೊನಾ ಸಂದರ್ಭದಲ್ಲಿ ಪ್ರತಿ ಮನೆಗೆ ತೆರಳಿ ಜನರ ಆರೋಗ್ಯ ವಿಚಾರಿಸುವ ಕೆಲಸ ಮಾಡಿದ್ದಾರೆ. ಇದು ಎಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ. ಜಿಲ್ಲೆಯಲ್ಲಿ ಕೊರೊನಾ ನಿರ್ಮೂಲನೆ ಮಾಡಲು ಜಿಲ್ಲಾಡಳಿತ, ಆರೋಗ್ಯ ಇಲಾಖೆಯೊಂದಿಗೆ ಆಶಾ ಕಾರ್ಯಕರ್ತೆಯರು ಜೊತೆಗೂಡಿ ಇನ್ನೂ ಹೆಚ್ಚಿನ ಶ್ರಮ ವಹಿಸಬೇಕು ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಂಭಾಗಣದಲ್ಲಿ ಜಿಲ್ಲಾಡಳಿತ ಹಾಗೂ ಸಹಕಾರ ಇಲಾಖೆ ಮತ್ತು ಜಿಲ್ಲೆಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿದ್ದು ಅದರಲ್ಲಿ 165 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದಂತೆ 49 ಕೇಸ್‍ಗಳು ಸಕ್ರಿಯವಾಗಿದೆ. ಜಿಲ್ಲಾಡಳಿತದಿಂದ ಚಿಗಟೇರಿ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ಉದ್ಘಾಟನೆಯಾಗಿದ್ದು, ಇದರಿಂದ ಇನ್ನೂ ಹೆಚ್ಚಿನ ಅನುಕೂಲವಾಗಿದೆ ಎಂದ ಅವರು, ಮಹಾಮಾರಿ ಕೊರೊನಾ ರೋಗದ ವಿರುದ್ದ ರಾಜ್ಯಾದ್ಯಂತ ಹೋರಾಡಿದ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ರೂ.12.7 ಕೋಟಿ ಹಣವನ್ನು ಪ್ರೋತ್ಸಾಹಧನದ ರೂಪದಲ್ಲಿ ಮುಖ್ಯಮಂತ್ರಿಗಳು ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಕೊರೊನಾ ಒಂದು ಹೆಮ್ಮಾರಿ ರೋಗ. ಈ ರೋಗಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಜೀವನ ಮುಡುಪಾಗಿಟ್ಟು ಸೇವೆ ಸಲ್ಲಿಸಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಮೆಚ್ಚುಗೆ ಪಡುವಂತಹದ್ದು. ಜಿಲ್ಲೆಯ 1224 ಆಶಾ ಕಾರ್ಯಕರ್ತೆಯರಿಗೆ ತಲಾ ರೂ. 3 ಸಾವಿರ ನೀಡಲಾಗುತ್ತಿದ್ದು, ರಾಜ್ಯದ ಎಲ್ಲೆಡೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಸಹಕಾರ ಸಚಿವರಿಗೆ ಅಭಿನಂದನೆ ಸಲ್ಲಿಸಲು ಇಷ್ಟಪಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243