ದಿನದ ಸುದ್ದಿ
ದಾವಣಗೆರೆ | ಕೊರೊನಾ ಜಾಗೃತಿಗೆ ಶ್ಲಾಘನೆ ಆಶಾ : ಕಾರ್ಯಕರ್ತೆಯರಿಗೆ ಸಚಿವರಿಂದ ಚೆಕ್ ವಿತರಣೆ
ಸುದ್ದಿದಿನ,ದಾವಣಗೆರೆ: ಮಹಾಮಾರಿ ಕೊರೊನಾ ರೋಗದಿಂದ ದೇಶವೇ ಲಾಕ್‍ಡೌನ್ ಆದ ಸಂದರ್ಭದಲ್ಲಿ ಆಶಾ ಕಾರ್ಯಕತೆಯರು ತಮ್ಮ ಜೀವ ಲೆಕ್ಕಿಸದೆ ಪ್ರತಿ ಮನೆ ಮನೆಗಳಿಗೆ ತೆರಳಿ ಸಾಂಕ್ರ್ರಾಮಿಕ ರೋಗವಾದ ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಇದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಬಸವರಾಜ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಂಭಾಗಣದಲ್ಲಿ ಜಿಲ್ಲಾಡಳಿತ ಹಾಗೂ ಸಹಕಾರ ಇಲಾಖೆ ಮತ್ತು ಜಿಲ್ಲೆಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೊಂದು ಹೆಮ್ಮೆ ಪಡುವ ಕಾರ್ಯಕ್ರಮವಾಗಿದೆ. ರೂ.3000 ಪ್ರೋತ್ಸಾಹ ಧನ ನೀಡುವುದು ಮುಖ್ಯವಲ್ಲ. ಗೌರವ ಸಲ್ಲಿಸುವುದು ಮುಖ್ಯವಾಗಿದೆ. ರಾಜ್ಯದಲ್ಲಿ 42,000 ಕಾರ್ಯಕರ್ತೆಯರು ಇದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲಾಡಳಿತ ಮತ್ತು ಎಲ್ಲಾ ಸಹಕಾರ ಸಂಘಗಳ ಸಹಯೋಗದೊಂದಿಗೆ ಪ್ರತಿಯೊಬ್ಬ್ಬ ಕಾರ್ಯಕರ್ತೆಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದರು.
ಪ್ರೋತ್ಸಾಹಧನದ ಮೊತ್ತ ಕಡಿಮೆ ಇರಬಹುದು. ಆದರೆ ಅವರಿಗೆ ಸಲ್ಲಿಸುತ್ತಿರುವ ಗೌರವ ದೊಡ್ಡದಾಗಿದೆ. ಮನೆ ಮನೆಗೆ ತೆರೆಳಿ ಆಶಾ ಕಾರ್ಯಕರ್ತೆಯರು ತುಂಬಾ ಶ್ರಮ ವಹಿಸಿ ಕೆಲಸ ನಿರ್ವಹಿಸಿದ್ದಾರೆ. ಅವರನ್ನು ಇಂದು ಗುರುತಿಸಿ ಗೌರವಿಸಲಾಗುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎಸ್.ರಾಮಪ್ಪ, ಮಹಾಪೌರರಾದ ಬಿ.ಜೆ.ಅಜಯ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಹನುಮಂತರಾಯ, ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243