ದಿನದ ಸುದ್ದಿ
ಬಕ್ರೀದ್ | ಅಕ್ರಮ ಗೋ ಸಾಗಾಟ ತಡೆಗೆ 20 ಚೆಕ್‍ಪೋಸ್ಟ್, ಒಂಟೆ ಮಾಂಸ ನಿಷೇಧ : ಎಸ್ಪಿ ಹನುಮಂತರಾಯ
ಸುದ್ದಿದಿನ,ದಾವಣಗೆರೆ: ಅಕ್ರಮ ಗೋ ಸಾಗಾಟ ತಡೆಯಲು ಈ ಬಾರಿ ಸರ್ಕಾರದ ಸೂಚನೆ ಬಹಳಷ್ಟು ಕಟ್ಟುನಿಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 20 ಚೆಕ್‍ಪೋಸ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
2018 ರಲ್ಲಿ 2 ಪ್ರಕರಣ, 2019 ರಲ್ಲಿ ಹರಿಹರದಲ್ಲಿ 1 ಪ್ರಕರಣ ಕಂಡಬಂದಿದೆ. ಈ ವರ್ಷ ಯಾವುದೇ ಪ್ರಕರಣ ಕಂಡುಬರಬಾರದು ಎಂದು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಅಕ್ರಮ ಸಾಗಾಟ ಬೇಡ ಜೊತೆಗೆ ಒಂಟೆ ಮಾಂಸ ಕೂಡ ಸರ್ಕಾರ ನಿಷೇಧಿಸಿದೆ. ಹಾಗಾಗಿ ಯಾರೊಬ್ಬರು ಕೂಡ ಒಂಟೆ ಮಾಂಸ ಬಳಸಬಾರದು ಎಂದು ಸೂಚಿಸಿದರು.
ಕೊರೊನಾ ಸಂದರ್ಭ ಇದಾಗಿದ್ದು, ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅದಕ್ಕಾಗಿ ಮುಸ್ಲಿಂ ಮೌಲ್ವಿ ಅಥವಾ ಧರ್ಮಗುರುಗಳಿಂದ ಒಂದು ವಿಡಿಯೋ ಮಾಡಿಸಿ ಎಲ್ಲಾ ಕಡೆಗಳಲ್ಲಿಯೂ ಪ್ರಸಾರ ಆಗುವಂತೆ ಮಾಡಬೇಕು. ಜೊತೆಗೆ ಮಸೀದಿಗಳ ಹತ್ತಿರ ಬಿತ್ತಿ ಪತ್ರ ಅಂಟಿಸಬೇಕು ಎಂದು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ನಾಗರಿಕರ ಹಿತ ಕಾಪಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಪಾಲನೆಯು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣಪುಟ್ಟ ಅಹಿತಕರ ಘಟನೆ ನಡೆದರೂ ತಕ್ಷಣವೇ ಪೆÇಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು.
ಹಬ್ಬಕ್ಕೂ ಮುನ್ನ ಮಸೀದಿಗಳ ಹತ್ತಿರ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಗಳ ಬದಿಯಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು ಎಂದು ಮುಖಂಡರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್‍ಪಿ, ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಸಿ ಶುಚಿತ್ವ ಮಾಡಿಕೊಡುವ ಭರವಸೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243