ದಿನದ ಸುದ್ದಿ
ರೇಣುಕಾಚಾರ್ಯಗೆ ಸಿಇಒ ಖಡಕ್ ಉತ್ತರ!
ಸುದ್ದಿದಿನ ಡೆಸ್ಕ್: ದಾವಣಗೆರೆಯಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸಿಇಒ ಎಸ್. ಅಶ್ವತಿ ಅವರು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಖಡಕ್ ಉತ್ತರ ನೀಡಿದ್ದಾರೆ!
ತಾಲೂಕಿನಲ್ಲಿ ಸಂಭವಿಸಿದ ಬೆಳೆ ಹಾನಿಗೆ ಈವರೆಗೆ ಪರಿಹಾರ ಬಂದಿಲ್ಲ. ಇದಕ್ಕೆ ಕಾರಣವೇನು ಎಂದು ಜಿಪಂ ಸದಸ್ಯರೊಬ್ಬರು ಸಿಇಒ ಅಶ್ವತಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಿಇಒ ಎಸ್. ಅಶ್ವತಿ ಬೆಳೆ ಹಾನಿ ಕುರಿತು ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. ಬಂದ ನಂತರ ವಿತರಣೆ ಮಾಡಲಾಗುವುದು ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ನೀವು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೀರಿ. ಇದು ಸರಿಯಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಿಇಒ ಎಸ್. ಅಶ್ವತಿ ಅವರು, ನಾನು ಆರೋಪ ಮಾಡುತ್ತಿಲ್ಲ. ವರದಿ ಕಳುಹಿಸಿದ್ದೇವೆ. ಅನುದಾನ ಬಂದ ನಂತರ ಕೊಡುತ್ತೇವೆ ಎಂದು ಖಡಕ್ಕಾಗಿ ಹೇಳಿದರು.
ಜನಪ್ರತಿನಿಧಿಗಳಿಗೆ ನೀವು ಗೌರವ ಕೊಡುತ್ತಿಲ್ಲ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದರು. ಇದಕ್ಕೆ ಅಶ್ವತಿ ಅವರು ಗೌರವ ಕೊಟ್ಟು ತೆಗೆದುಕೊಳ್ಳುವುದು ಕ್ರಮ. ಅಧಿಕಾರಿಗಳ ಜತೆಗೆ ರಾಜಕಾರಣಿಗಳು ಈ ರೀತಿ ಮಾತನಾಡಬಹುದೇ ಎಂದು ಖಾರವಾಗಿ ಕೇಳಿದರು. ಆದರೆ ರೇಣುಕಾಚಾರ್ಯ ಅವರು ಮಾತ್ರ ಸಿಇಒ ಎಸ್. ಅಶ್ವತಿ ಅವರ ಮೇಲೆ ಆರೋಪಗಳ ಸುರಿಮಳೆಗೈದರು.
ಈ ವೇಳೆ ಸಭೆಯಲ್ಲಿ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.