ದಿನದ ಸುದ್ದಿ

ದಾವಣಗೆರೆ | 120 ಕೋಟಿ‌ ವೆಚ್ಚದಲ್ಲಿ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ನಿರ್ಮಾಣ : ಸಂಸದ ಜಿ.ಎಂ.ಸಿದ್ದೇಶ್ವರ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ಸ್ಮಾರ್ಟ್ ಸಿಟಿ ಯೋಜನೆಯ ರೂ.90 ಕೋಟಿ ಹಾಗೂ ಸಾರಿಗೆ ಇಲಾಖೆಯ ರೂ.30 ಕೋಟಿ ಒಟ್ಟು ರೂ.120 ಕೋಟಿ ಮೊತ್ತದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿಿದರು.

ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಕೆ ಎಸ್ ಆರ್ ಟಿ ಸಿ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆಯನ್ನು ಸೋಮವಾರ ನೆರೆವೇರಿಸಿ ಮಾತನಾಡಿ, ಜೋರು ಮಳೆ ಬಂದರೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನೀರು ತುಂಬಿ ಅವ್ಯವಸ್ಥೆ ಆಗುತ್ತಿತ್ತು. ಬಸ್ ನಿಲ್ದಾಣದಲ್ಲಿ ವ್ಯವಸ್ಥಿತ ಪಾರ್ಕಿಂಗ್, ಶಾಪಿಂಗ್ ಕಾಂಪ್ಲೆಕ್ಸ್, ಸಿನೆಮಾ ಥಿಯೇಟರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಇರಲಿವೆ. 2 ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರರು ಅಚ್ಚುಕಟ್ಟಾಗಿ, ಶಾಶ್ವತವಾಗಿ ಉಳಿಯುವಂತೆ ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಿಕೊಡಬೇಕು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅನೇಕ ಕೆಲಸಗಳು ನಡೆಯುತ್ತಿವೆ. ಹೈಟೆಕ್ ರೈಲ್ವೇ ನಿಲ್ದಾಣ, ರೂ.35 ಕೋಟಿ ವೆಚ್ಚದಲ್ಲಿ ಸಿಆರ್‍ಸಿ, ಉತ್ತಮ ರಸ್ತೆಗಳು, ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ. ಹಾಗೂ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಜೊತೆಗೆ ರೂ.5 ಕೋಟಿ ವೆಚ್ಚದಲ್ಲಿ ಎಸಿ ಕಚೇರಿ ನಿರ್ಮಿಸಲು ಒಪ್ಪಿಗೆ ದೊರೆತಿದೆ.

ದಾವಣಗೆರೆಯನ್ನು ಅತ್ಯುತ್ತಮ ಜಿಲ್ಲೆಯನ್ನಾಗಿಸುವುದು ನನ್ನ ಕನಸಾಗಿದ್ದು ಇದನ್ನು ಸಾಕಾರಗೊಳಿಸಲು ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳು ಸಹಕರಿಸುತ್ತಿದ್ದು, ಮುಂದೆಯೂ ಹೀಗೆಯೇ ಕೈಹಿಡಿಯುತ್ತಾರೆಂಬ ಭರವಸೆ ಇದೆ ಎಂದರು.

ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಇಂದು ಚಾಲನೆ ನೀಡಿದ್ದು ಅಲ್ಲಿ ನಿರಪಯುಕ್ತ ಬಸ್‍ನಲ್ಲಿ ಮಹಿಳೆಯರಿಗೆ ಮೊಬೈಲ್ ಶೌಚಾಲಯ ನಿರ್ಮಿಸಿರುವುದು ಅತ್ಯುತ್ತಮವಾಗಿದ್ದು ಈ ಕೆಲಸ ಶ್ಲಾಘನೀಯವಾಗಿದೆ ಎಂದ ಅವರು ಉತ್ತಮ ಸೇವೆಗಾಗಿ ಬೆಳ್ಳಿ ಪದಕ ಪಡೆದವರ ಜವಾಬ್ದಾರಿ ಇನ್ನೂ ಹೆಚ್ಚಿದ್ದು, ಎಲ್ಲರೂ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಬೇಕೆಂದರು.

ನಗರಾಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿ ಮಾತನಾಡಿ, ಇಂದು ಸಂತೋಷದ ದಿನವಾಗಿದ್ದು, ಇಡೀ ರಾಜ್ಯದಲ್ಲೇ ದಾವಣಗೆರೆಯ ಬಸ್ ನಿಲ್ದಾಣ ಮಾದರಿ ಆಗಬೇಕು. ಆ ರೀತಿಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶ್ರದ್ದೆಯಿಂದ ನಿಗದಿತ ಸಮಯದೊಳಗೆ ಕೆಲಸ ಮಾಡಬೇಕೆಂದು ಸೂಚಿಸಿದ ಅವರು ಸಂಸದರ ಪ್ರಯತ್ನದಿಂದ ಸ್ಮಾರ್ಟ್‍ಸಿಟಿ ಯೋಜನೆಯಡಿ ಅತ್ಯಾಧುನಿಕ ಬಸ್ ನಿಲ್ದಾಣ ಕಾರ್ಯ ಆರಂಭವಾಗಿದ್ದು, ಅವರು ಪ್ರತಿ ತಾಲ್ಲೂಕುಗಳ ಬಗ್ಗೆ ಗಮನ ಹರಿಸಿ ಮಾಡಿಸುತ್ತಿದ್ದಾರೆ ಎಂದರು.

ಬಸ್ ಚಾಲಕರ ಕೈಯಲ್ಲಿ ಎಲ್ಲ ಪ್ರಯಾಣಿಕರ ಪ್ರಾಣ ಇರುತ್ತದೆ. ಆದ ಕಾರಣ ನಿರ್ಲಕ್ಷ್ಯ ವಹಿಸದೇ, ಜಾಗ್ರತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದ ಅವರು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಸಂಸ್ಥೆಯನ್ನು ಅಭಿವೃದ್ದಿಯತ್ತ ಕೊಂಡಯ್ಯಲು ಸಾಧ್ಯ ಎಂದರು.

ಕ.ರಾ.ರ.ಸಾ ನಿಗಮದ ಅಧ್ಯಕ್ಷರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಚಂದ್ರಪ್ಪ ಮಾತನಾಡಿ, ಜಿಲ್ಲೆಯ ಸಂಸದರಾದ ಜಿ.ಎಂ ಸಿದ್ದೇಶ್ವರವರ ಪ್ರಯತ್ನ ಮತ್ತು ಒತ್ತಾಸೆಯಂತೆ ಇಂದು ನಗರದಲ್ಲಿ ರೂ.120 ಕೋಟಿಯಲ್ಲಿ ಸುಸಜ್ಜಿತ ಬಸ್‍ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸಗಳನ್ನು ಕೈಗೊಳ್ಳುತ್ತಿದ್ದಾರೆ.

ಸಂಸ್ಥೆಯಲ್ಲಿ ಡೀಸೆಲ್‍ಗೂ ಹಣ ಇಲ್ಲದಂತಹ ಕಷ್ಟ ಕಾಲದಲ್ಲಿ, ಬಸ್‍ಗಳು ಓಡಾಡಲು ಕಷ್ಟಕರವಾಗಿದ್ದ ಸಂದರ್ಭದಲ್ಲಿ ಸಾರಿಗೆ ಸಚಿವರು ಸರ್ಕಾರದ ಮನವೊಲಿಸಿ 1780 ಕೋಟಿ ಅನುದಾನವನ್ನು ತಂದರು. ಆದರೆ ಕಳೆದ ಮಾಹೆಯ 11 ಮತ್ತು 12 ನೇ ತಾರೀಕಿನಂದು ಇಲಾಖೆಯ ನೌಕರರು ಏಕಾಏಕಿ ಪ್ರತಿಭಟನೆ ಆರಂಭಿಸಿದಿರಿ. ಸುಮಾರು 1.30 ಲಕ್ಷ ನೌಕರರಿರುವ ಒಂದು ತಿಂಗಳಿಗೆ ವೇತನ ನೀಡಲು ಸುಮಾರು 300 ಕೋಟಿ ಅವಶ್ಯಕತೆ ಇರುವ ಸಂಸ್ಥೆಯ ಕಷ್ಟಗಳೆಲ್ಲ ತಿಳಿದಿದ್ದ ನೀವು ಸರ್ಕಾರಕ್ಕೆ ಬೆಲೆ ಕೊಡುವ ಕೆಲಸ ಮಾಡಬೇಕಿತ್ತು ಎಂದರು.

ಇಲಾಖೆ ನಷ್ಟದಲ್ಲಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಒಂದೇ ಕಾರಣಕ್ಕೆ ಬಸ್‍ಗಳನ್ನು ಓಡಿಸುತ್ತಿದ್ದೇವೆ. 30 ಸಾವಿರ ಬಸ್ ಗಳ ಪೈಕಿ 20 ಸಾವಿರ ಬಸ್‍ಗಳನ್ನು ಓಡಿಸುತ್ತಿದ್ದು 10 ಸಾವಿರ ಬಸ್‍ಗಳು ಗ್ಯಾರೇಜ್‍ನಲ್ಲಿ ನಿಂತಿವೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಪ್ರತಿಭಟನೆ ನಡೆಸಿದಿರಿ. ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ಸಂಸ್ಥೆಯನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುಬಹುದೆಂದು ಸೂಚ್ಯವಾಗಿ ಹೇಳುತ್ತಿದ್ದೇನೆ ಎಂದ ಅವರು ನೌಕರರೆಲ್ಲರೂ ಇದು ನಮಗೋಸ್ಕರ ಇರುವ ಸಂಸ್ಥೆ ಎಂಬ ಮನೋಭಾವ ಹೊಂದಬೇಕೆಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version