ದಿನದ ಸುದ್ದಿ

ದಾವಣಗೆರೆ | ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಕಲ ಪ್ರಯತ್ನ

Published

on

ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ರೋಗಿಗಳನ್ನು ಉಳಿಸಲು ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು, ಜನರೂ ಕೂಡ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು 526 ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಲು ಅಗತ್ಯವಿರುವಷ್ಟು ತಯಾರಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ. ಒಂದು ತಿಂಗಳು ಜಿಲ್ಲೆಯಲ್ಲಿ ಯಾವುದೇ ಪ್ರಕರಣವಿಲ್ಲದೇ ಗ್ರೀನ್ ಝೋನ್‍ಗೆ ಬಂದಿದ್ದು ಆ ಸಮಯದಲ್ಲೂ ಹಲವಾರು ತಯಾರಿ ನಡೆಸಲಾಗಿದ್ದು ಅದು ಈಗ ಉಪಯೋಗಕ್ಕೆ ಬರುತ್ತಿದೆ ಎಂದರು.

ವ್ಯಾಪಕ ಆರೋಗ್ಯ ತಪಾಸಣೆ

ನಗರದ ಎರಡು ಮೆಡಿಕಲ್ ಕಾಲೇಜುಗಳು, ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯರು, ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು ಸೇರಿದಂತೆ ಎಲ್ಲ ವೈದ್ಯರ ಸಹಕಾರ ಚೆನ್ನಾಗಿದೆ. ಜಾಲಿನಗರ, ಬಾಷಾನಗರ, ಇಮಾಮ್‍ನಗರ, ಎಸ್‍ಪಿಎಸ್ ನಗರ, ಬೇತೂರು ರಸ್ತೆ, ಕೆಟಿಜೆ ನಗರ ಮತ್ತು ಶಿವನಗರಗಳಲ್ಲಿ ಒಟ್ಟು 7 ಕಡೆಗಳಲ್ಲಿ ಕಂಟೈನ್‍ಮೆಂಟ್ ಝೋನ್ ಮಾಡಲಾಗಿದ್ದು, ನಿಯಮಾನುಸಾರ ಸೀಲ್‍ಡೌನ್ ಮಾಡಿ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಹಾಗೂ ಈ ಪ್ರದೇಶಗಳನ್ನು ವ್ಯಾಪಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಪರೀಕ್ಷೆಗೆ ಗಂಟಲುದ್ರವ ಮಾದರಿ 

ಎಲ್ಲ ಪ್ರಾಥಮಿಕ ಮತ್ತು ದ್ವಿತೀಯ ಸೇರಿದಂತೆ ಕಂಟೈನ್‍ಮೆಂಟ್ ಝೋನ್‍ನಲ್ಲಿ ಬರುವ ಎಲ್ಲರ ಗಂಟಲುದ್ರವ ಮಾದರಿ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ದಿನಕ್ಕೆ 200 ಸ್ಯಾಂಪಲ್ ಕಳುಹಿಸುತ್ತಿದ್ದು ಇದನ್ನು 400 ರಿಂದ 500 ರವರೆಗೆ ಹೆಚ್ಚಿಸಲು ಸೂಚಿಸಿದ್ದೇನೆ. ತೀವ್ರ ಉಸಿರಾಟದ ತೊಂದರೆ ಮತ್ತು ಶೀತ ಜ್ವರದಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಡ್ರೈವರ್, ಕ್ಲೀನರ್‍ಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version