ದಿನದ ಸುದ್ದಿ

ದಾವಣಗೆರೆ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೋವಿಡ್ ಲಸಿಕಾ ಜಾಗೃತಿ ಅಭಿಯಾನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಮಹಾನಗರಪಾಲಿಕೆ ಸಹಯೋಗದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಕೋವಿಡ್ 2ನೇ ಅಲೆ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ಶುಕ್ರವಾರ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಯಿತು.

ಭಾಷಾನಗರ, ಬೀಡಿ ಲೇಔಟ್, ಆಜಾದ್‍ನಗರ, ಮೆಹಬೂಬ್ ನಗರ, ಶಿವ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಲಸಿಕೆ, ಮಾಸ್ಕ್, ಸಾಮಾಜಿಕ ಅಂತರದ ಕುರಿತು ಅರಿವು ಮೂಡಿಸಿದರು.

ಈ ವೇಳೆ ಆಶಾ ಕಾರ್ಯಕರ್ತೆಯರು ‘ಜನಸಂದಣಿ ಪ್ರದೇಶದಿಂದ ದೂರವಿರಿ’, ‘ನಿಮ್ಮ ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ’, ‘1977 ಕ್ಕೆ ಮೊದಲು ಹುಟ್ಟಿದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’, ‘ಕೈಗಳನ್ನು ನೈರ್ಮಲ್ಯದೊಂದಿಗೆ ಕಾಪಾಡಿಕೊಳ್ಳಿ’ ಎಂಬಂತಹ ಘೋಷಣೆಗಳೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತ ಮಾಸ್ಕ್ ವಿತರಿಸಿದರು.

ಜಾಥಾ ಮುಗಿದ ಬಳಿಕ ಆಜಾದ್‍ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಳೆದ ವರ್ಷ ಹಳೆ ದಾವಣಗೆರೆ ಕೊರೋನದಂತಹ ಗಂಡಾಂತರ ಎದುರಿಸಿ, ಅದರಿಂದ ಪಾರಾಗಿದೆ ಎಂಬುದು ನಮಗೆಲ್ಲ ತಿಳಿದ ವಿಚಾರ. ಈ ದೃಷ್ಟಿಯಿಂದ ನಾವು ಈ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಹೀಗೆ ಕೋವಿಡ್-19 ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ |ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ನೇಣಿಗೆ ಶರಣು..!

ಈಗಾಗಲೇ ಜಿಲ್ಲಾದ್ಯಂತ 1 ಲಕ್ಷದ 22 ಸಾವಿರ ಜನರಿಗೆ ಲಸಿಕೆ ಹಾಕಿಸಿದ್ದು, 45 ವರ್ಷದ ಮೇಲ್ಪಟ್ಟ 93 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬೇಕು. ಆದ ಕಾರಣ ಈ ಭಾಗದ ಸ್ಥಳೀಯ ಕಾರ್ಪೋರೇಟರ್, ಮುಖಂಡರ ಸಮ್ಮುಖದಲ್ಲಿ ಲಸಿಕಾ ಅಭಿಯಾನವನ್ನು ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.

ಸಾರ್ವಜನಿಕರು ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ತಮ್ಮನ್ನ ತಾವು ಕೊರೋನಾದಿಂದ ಸಂಭವಿಸುವ ಮರಣದಿಂದ ರಕ್ಷಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಡಿಹೆಚ್‍ಒ ಡಾ.ನಾಗರಾಜ್ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಡಿ ಈಗಾಗಲೇ 115 ಉಪಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಪ್ರತಿ ಒಂದು ಉಪಕೇಂದ್ರಕ್ಕೆ 50 ಜನರನ್ನು ಗುರಿ ಮಾಡಿ ಲಸಿಕೆ ನೀಡಲಾಗುತ್ತಿದೆ. ಹಾಗೂ ನಗರದಲ್ಲಿ ಒಂದು ದಿನಕ್ಕೆ 10 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 6 ಸಾವಿರ ಜನರನ್ನು ತಲುಪುತ್ತಿದ್ದೇವೆ. ಇಲ್ಲಿಯವರೆಗೂ ಒಟ್ಟು 93 ಸಾವಿರ ಜನರಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿಸಲು ಎಲ್ಲಾ ಇಲಾಖೆಯ ಪ್ರತಿನಿಧಿಗಳು ಸರ್ವೆ ನಡೆಸುವ ಮೂಲಕ ಶ್ರಮವಹಿಸುತ್ತಿದ್ದು, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್.ಎಲ್.ಡಿ, ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಿಎಲ್‍ಒ ಡಾ.ಮುರುಳೀಧರ್, ಡಿಎಫ್‍ಒ ಡಾ.ರೇಣುಕಾರಾಧ್ಯ, ಡಿಎಂಒ ಡಾ.ನಟರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ, ಡಾ.ಮಂಜುಳ, ಡಾ.ವೇದಮೂರ್ತಿ, ಡಾ.ಸುನಿತ, ಡಾ.ವೆಂಕಟೇಶ್, ಡಾ.ಉಮಾಪತಿ ಸೇರಿದಂತೆ ಇತರೆ ಎಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version