ದಿನದ ಸುದ್ದಿ
ದಾವಣಗೆರೆ | ನಗರದಿಂದ ಗ್ರಾಮಗಳಿಗೆ ಸೋಂಕು ರವಾನೆ
ಸುದ್ದಿದಿನ, ದಾವಣಗೆರೆ : ಜಿಲ್ಲೆಯಲ್ಲಿ ಕಳೆದ ಏ. 30 ರಿಂದ ಮೇ. 06 ವರೆಗಿನ ಅವಧಿಯಲ್ಲಿ 12979 ಟೆಸ್ಟ್‍ಗೆ 2742 ಸೋಂಕು ಪ್ರಕರಣಗಳು ವರದಿಯಾಗಿದ್ದು, 1428 ಜನ ಗುಣಮುಖ ಹೊಂದಿ, 22 ಜನ ಮೃತಪಟ್ಟಿದ್ದರು, ಈ ಅವಧಿಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 21.12 ರಷ್ಟು ಇತ್ತು. ದಾವಣಗೆರೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 1620 ಪ್ರಕರಣ ವರದಿಯಾಗಿವೆ. ಉಳಿದಂತೆ ಹರಿಹರ-368, ಜಗಳೂರು-137, ಚನ್ನಗಿರಿ-249, ಹೊನ್ನಾಳಿ-253, ಇತರೆ ಜಿಲ್ಲೆಯ 115 ಪ್ರಕರಣ ವರದಿಯಾಗಿತ್ತು ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ರಾಘವನ್ ಅವರು ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ವಿವರ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮೇ. 07 ರಿಂದ 12 ವರೆಗಿನ ಅವಧಿಯಲ್ಲಿ 11301 ಟೆಸ್ಟ್‍ಗೆ 2085 ಸೋಂಕು ದೃಢಪಟ್ಟಿದ್ದು, 1757 ಜನ ಗುಣಮುಖರಾಗಿ, 15 ಜನ ಮೃತಪಟ್ಟಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ 1187, ಹರಿಹರ-208, ಜಗಳೂರು-104, ಚನ್ನಗಿರಿ-214, ಹೊನ್ನಾಳಿ-288 ಸೋಂಕು ಪ್ರಕರಣ ವರದಿಯಾಗಿದೆ. ಈ ಅವಧಿಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 18.44 ಕ್ಕೆ ಇಳಿಕೆಯಾಗಿದ್ದು, ಇದು ಜಿಲ್ಲೆಯ ಪಾಲಿಗೆ ಭರವಸೆಯ ಬೆಳಕಿನಂತೆ ಗೋಚರಿಸಿದೆ.
ಇದನ್ನೂ ಓದಿ | ದಾವಣಗೆರೆ | ಆಸ್ಪತ್ರೆಗಳ ಎದುರು ಬೆಡ್ ಸ್ಥಿತಿಗತಿ ಬೋರ್ಡ್‍ನಲ್ಲಿ ಪ್ರದರ್ಶಿಸಲಿ : ಜಿ.ಎಂ.ಸಿದ್ದೇಶ್ ಕಿಡಿ
ಕೋವಿಡ್‍ನ ಎರಡನೆ ಅಲೆಯಲ್ಲಿ ಅಂದರೆ ಏಪ್ರಿಲ್ ನಿಂದ ಈವರೆಗೆ 32-ಪುರುಷ, 12- ಮಹಿಳೆ ಸೇರಿದಂತೆ ಒಟ್ಟು 44 ಜನ ಕೋವಿಡ್‍ನಿಂದ ಮೃತಪಟ್ಟಿದ್ದಾರೆ.
ಗ್ರಾಮೀಣ ಪ್ರದೇಶಗಳಿಂದ ತರಕಾರಿ, ಹಾಲು, ಹೂವು ಹಣ್ಣು ಮಾರಾಟ ಮಾಡಲು ಹಾಗೂ ಆಸ್ಪತ್ರೆಗಳಿಗೆ ನಗರ, ಪಟ್ಟಣಗಳಿಗೆ ಬಂದು ಹೋಗುವವರಿಂದ, ಗ್ರಾಮೀಣ ಪ್ರದೇಶಗಳಿಗೆ ಕೋವಿಡ್ ಸೋಂಕು ವ್ಯಾಪಿಸುತ್ತಿದೆ. ಅಲ್ಲದೆ ಕೋವಿಡ್ ಹೆಚ್ಚು ಇರುವ ಬೆಂಗಳೂರು ನಗರದಿಂದಲೂ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಸುಮಾರು 4 ಸಾವಿರ ಜನರು ಹಿಂದಿರುಗಿರುವುದಾಗಿ ಅಂದಾಜಿಸಲಾಗಿದ್ದು, ಇವರಿಂದಲೂ ಕೋವಿಡ್ ಸೋಂಕು ಹರಡುತ್ತಿದೆ.
ಹೀಗಾಗಿ ಹೆಚ್ಚಿನ ಸೋಂಕು ವರದಿಯಾಗುವ ಗ್ರಾಮಗಳಲ್ಲಿ ಮನೆ ಮನೆ ಸರ್ವೆ ನಡೆಸಿ, ಪರೀಕ್ಷೆ ನಡೆಸಲಾಗುತ್ತಿದೆ. ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಮನೆ ಮನೆ ಸರ್ವೆ ನಡೆಸಿ ಪರೀಕ್ಷೆ ನಡೆಸಿದ್ದು 72 ಜನರಿಗೆ ಸೋಂಕು ದೃಢಪಟ್ಟಿದೆ, ಇನ್ನೂ ಸುಮಾರು 10 ಜನರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ.
ಕೂಲಂಬಿ ಗ್ರಾಮದಲ್ಲಿಯೂ ಕೂಡ ಮನೆ ಮನೆ ಸರ್ವೆ ನಡೆಸಿ ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್‍ನ ಮೊದಲನೆ ಅಲೆಯ ಸಂದರ್ಭದಲ್ಲಿ ಜನರು ತೀವ್ರ ಎಚ್ಚರಿಕೆ ವಹಿಸಿ, ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಸಹಕರಿಸುತ್ತಿದ್ದರು. ಆದರೆ ಎರಡನೆ ಅಲೆಯ ಈ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುವ ಲಾಕ್‍ಡೌನ್ ಕ್ರಮಗಳಿಗೆ ಜನರು ಸಹಕರಿಸುತ್ತಿಲ್ಲ.
ಸೋಂಕು ಇದ್ದರೂ ಕೋವಿಡ್ ಕೇರ್ ಸೆಂಟರ್‍ಗೆ ಬರುತ್ತಿಲ್ಲ, ಹೀಗಾಗಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ ಎಂದರು. ಸಚಿವರು ಪ್ರತಿಕ್ರಿಯಿಸಿ, ಕೋವಿಡ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕು, ಅಲ್ಲದೆ ಹೊರಗಡೆ ಹೋಗದಂತೆ ಅಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಸೆಂಟರ್‍ನಲ್ಲಿ ಸೂಕ್ತ ರೀತಿಯಲ್ಲಿ ಊಟ, ಉಪಹಾರ, ಅಗತ್ಯ ವೈದ್ಯಕೀಯ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ದಾವಣಗೆರೆಯಲ್ಲಿಯೇ 06 ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸಿದ್ದು, ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243