ದಿನದ ಸುದ್ದಿ

ದಾವಣಗೆರೆ | ನಾಳೆಯಿಂದಲೇ ಹೋಟೆಲ್ ಕಾರ್ಯಾರಂಭಕ್ಕೆ ಸೂಚನೆ ; ತಾವಿರುವಲ್ಲಿಯೇ ಪಡಿತರ ಪಡೆಯಿರಿ: ಜಿಲ್ಲಾಧಿಕಾರಿ

Published

on

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‍ಡೌನ್‍ನಿಂದ ಸಿಲುಕಿಕೊಂಡಿರುವ ನೆರೆ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಸಾರ್ವಜನಿಕರು ತಮ್ಮ ಬಳಿ ಪಡಿತರ ಚೀಟಿ ಇದ್ದಲ್ಲಿ ತಾವಿರುವಲ್ಲಿಯೇ ಪಡಿತರ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಇಂದು ಜಿಲ್ಲಾಡಳಿತದ ಭವನದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಯಾವುದೇ ನಿರಾಶ್ರಿತರು ಹಸಿವಿನಿಂದ ಬಳಲಬಾರದು. ವಿವಿಧ ರಾಜ್ಯಗಳ ಕಾರ್ಮಿಕರು, ಅಲೆಮಾರಿ ಜನಾಂಗದವರು, ಅವರು ಇರುವಲ್ಲಿಗೆ ಅಧಿಕಾರಿಗಳು ತೆರಳಿ ತಯಾರಿಸಿದ ಆಹಾರ ಅಥವಾ ಪಡಿತರ ಒದಗಿಸುವ ಮೂಲಕ ಅವರಿಗೆ ನೆರವು ನೀಡಬೇಕೆಂದರು.

ಲೈಂಗಿಕ ಕಾರ್ಯಕರ್ತರು, ಮಂಗಳಮುಖಿಯರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಂಬಂಧಿಸಿದ ತಹಶೀಲ್ದಾರರು ವರದಿ ಪಡೆದು ಅವರಿಗೆ ಅಗತ್ಯ ಪಡಿತರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕೆಂದರು.

ಜಿಲ್ಲೆಯಲ್ಲಿ 156 ಸಫಾಯಿ ಕರ್ಮಚಾರಿ ಕುಟುಂಬಗಳಿದ್ದು, ಅವರಲ್ಲಿ ಕೆಲವರಿಗೆ ಪಡಿತರ ಚೀಟಿ ಇದೆ. ಒಂದು ವೇಳೆ ಇಲ್ಲದವರಿಗೂ ಅಗತ್ಯ ಪಡಿತರ ನೀಡಿ. ಮತ್ತು ಬೇಕರಿಗಳು ಕಾರ್ಯಾರಂಭವಾಗಿರುವ ಬಗ್ಗೆ ಖಚಿತಪಡಿಸಿ ಎಂದರು.

  • ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ ಜಮಾತೆ ಇಸ್ಲಾಂ ಧರ್ಮಸಭೆಯಲ್ಲಿ ಹಾಜರಾದ ಐದು ವ್ಯಕ್ತಿಗಳು ನಗರದಲ್ಲಿ ಇದ್ದಾರೆಂಬ ಟಿವಿ ಮಾಧ್ಯಮದಲ್ಲಿ ಸುದ್ದಿ ಬಂದಿದ್ದು, ಅವರು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಪಡಬೇಕು. ಅಥವಾ ಯಾರಾದರೂ ಅವರ ಅಕ್ಕಪಕ್ಕ ವಾಸಿಸುವವರು ಅಂತಹವರ ಮಾಹಿತಿ ನೀಡಿದರೆ, ಅಂತಹವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.

|ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿಗಳು

ಬಳ್ಳಾರಿಯ ಹೊಸಪೇಟೆಯ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಅವರನ್ನು ತಪಾಸಣೆ ನಡೆಸಿದ ವೈದ್ಯರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ. ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಒಟ್ಟು 78 ವಾಹನಗಳನ್ನು ಸೀಜ್ ಮಾಡಲಾಗಿದ್ದು, ದಯಮಾಡಿ ಸಾರ್ವಜನಿಕರು ಮನೆಯಿಂದ ಹೊರ ಹೋಗಲು ಕಾರಣ ಬೇಡ. ಮನೆಯಲ್ಲಿರಲು ಹಲವಾರು ಕಾರಣಗಳಿವೆ ಎಂದರು.

ಈ ಕುರಿತು ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಮನವಿ ಮಾಡಬೇಕೆಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಹಾಗೂ ವಿವಿಧ ಧರ್ಮಗುರುಗಳು, ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ದಾವಣಗೆರೆ ಮತ್ತು ಹರಿಹರ ಹೊರತುಪಡಿಸಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆಗಳನ್ನು ನೀಡಬೇಕೆಂದರು.

ಆಹಾರ ಇಲಾಖೆಯ ಉಪ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಜಿಲ್ಲೆಯ ರೈಸ್‍ಮಿಲ್‍ಗಳು, ದಾಲ್‍ಮಿಲ್‍ಗಳು ಕಾರ್ಯಾರಂಭ ಮಾಡಿದ್ದು, ಪೂರಕ ಸಾಮಗ್ರಿಗಳು ದೊರೆಯುತ್ತಿವೆ ಎಂದು ಮಾಲೀಕರು ತಿಳಿಸಿದ್ದಾರೆ ಎಂದರು.

ಹೋಟೆಲ್ ತೆರೆಯಲು ಜಿಲ್ಲಾಧಿಕಾರಿ ಸೂಚನೆ

ಕೊರೊನಾ ವೈರಸ್ ಹಿನ್ನೆಲೆ ಲಾಕ್‍ಡೌನ್ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹೋಟೆಲ್‍ಗಳನ್ನು ಕಾರ್ಯಾರಂಭ ಮಾಡಬೇಕು. ಪ್ರಮುಖವಾಗಿ ನೂತನ್ ಕಾಲೇಜು ರಸ್ತೆಯ ಸವಿತಾ ಹೋಟೆಲ್, ವಿದ್ಯಾನಗರದ ಸಿಗಂಧೂರೇಶ್ವರಿ ಹೋಟೆಲ್, ಅಜ್ಜಿ ಹೋಟೆಲ್ ಖಾನಾವಳಿ, ಆಂಜನೇಯ ಬಡಾವಣೆಯ ಬಿಐಇಟಿ ರಸ್ತೆಯ ಮಮತಾ ಹೋಟೆಲ್, ಹದಡಿ ರಸ್ತೆಯ ಶಿವಸಾಗರ್ ಹೋಟೆಲ್‍ಗಳನ್ನು ಏ.1 ರಿಂದಲೇ ತೆರೆಯಬೇಕು. ಉಳಿದ ಹೋಟೆಲ್‍ಗಳವರು ಈ ಕೂಡಲೇ ತೆರೆಯಬೇಕೆಂದರು.

ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಇತರೆ ಅಧಿಕಾರಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version