ದಿನದ ಸುದ್ದಿ
ಡ್ರಗ್ಸ್ ಕತ್ತಲೆ ಪ್ರಪಂಚ, ಈಗಿನ ಯುವ ಸಮೂಹ ಅರಿತು ದೂರವಿರಬೇಕು : ಐಜಿ ಡಾ: ರವಿಕಾಂತೇಗೌಡ
ಸುದ್ದಿದಿನ,ದಾವಣಗೆರೆ:ಡಗ್ಸ್ ಕತ್ತಲ ಪ್ರಪಂಚ, ಈ ಜಾಲದ ಬಗ್ಗೆ ಅರಿತು ಯುವ ಸಮೂಹ ದೂರವಿರಬೇಕೆಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಡಾ.ಬಿ.ಆರ್ ರವಿಕಾಂತೇಗೌಡ ವಿದ್ಯಾರ್ಥಿಗಳಿಗೆ ತಿಳಿಸಿದರು.
ಗುರುವಾರ(ಜೂನ್.26) ರಂದು ನಗರದ ಪಿ.ಬಿ.ರಸ್ತೆಯಲ್ಲಿರುವ ರೇಣುಕಾ ಮಂದಿರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡದೇಶ ಹಾಗೂ ಶ್ರೀಮಂತದೇಶವನ್ನು ಕಾಡುತ್ತಿರುವುದು ಸಮಸ್ಯೆಯೇ ಈ ಡಗ್ಸ್ ಮಾಫಿಯಾ, ಇದಕ್ಕೆ ಯುವ ಜನರು ಬಲಿಯಾದಲ್ಲಿ ಕುಟುಂಬವೇ ನಾಶವಾಗುತ್ತದೆ. ಜೊತೆಗೆ ದೇಶವನ್ನು ನಾಶ ಮಾಡಲು ಯಾವುದೇ ರೀತಿಯ ಅಣುಬಾಂಬ್ ಬೇಕಿಲ್ಲ, ಈ ಡಗ್ಸ್ ಇದ್ದರೆ ಸಾಕು. ಆ ದೇಶವೇ ನಾಶವಾಗುತ್ತದೆ. ಇಂದಿನ ಯುವಕರು ತಂದೆ, ತಾಯಿ ಹಾಗೂ ಗುರುಗಳ ಋಣ ಎಂದಿಗೂ ಮರೆಯಬಾರದು. ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವನವನ್ನೇ ಕಳೆದುಕೊಳ್ಳುತ್ತಾನೆ, ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ.
ಕುಟುಂಬ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಡಗ್ಸ್ ಮಾರಾಟ ಮಾಡುವವರು ನಿಮ್ಮನ್ನು ಸೆಳೆಯುತ್ತಾರೆ. ಕೀಡಿಗೇಡಿಗಳು ಡ್ರಗ್ಸ್ ಮೂಲಕ ಯುವಕರನ್ನು ದುರ್ಮಾಗಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀವು ಅದರ ಬಗ್ಗೆ ಸೂಚನೆ ಸಿಕ್ಕ ತಕ್ಷಣ 1933 ಅಥವಾ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆಮಾಡಿ ಮಾಹಿತಿ ತಿಳಿಸಿಬೇಕು. ಮೊಬೈಲ್ ಎಷ್ಟು ಪ್ರಯೋಜನವಾಗಿದೆ ಅಷ್ಟೆ ದುಷ್ಪರಿಣಾಮವಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾದವ್ ವಿಠ್ಠಲ್ ರಾವ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯನ್ನು ಮಾಡುವ ಮೊದಲು ಕುಟುಂಬದ ಭವಿಷ್ಯದ ಕುರಿತು ಆಲೋಚಿಸಬೇಕು. ಮಾದಕ ವಸ್ತುಗಳ ಮಾರಾಟ ಕಾನೂನಿನನ್ವಯ ಅಪರಾಧವಾಗುತ್ತದೆ. ಯುವಕರು ಇಂತಹ ಮಾದಕ ವಸ್ತುಗಳಿಂದ ದೂರ ಇರುವ ಮೂಲಕ ಮಾನವ ಸಂಪನ್ಮೂಲವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.
ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. 1987 ರಂದು ವಿಶ್ವ ಸಂಸ್ಥೆಯ ಮಾದಕ ವಸ್ತುಗಳ ದುರುಪಯೋಗವನ್ನು ತಡೆಗಟ್ಟುವ ನಿರ್ದಿಷ್ಟ ಆಚರಣೆಯನ್ನು ಜಾರಿಗೆ ತರಲಾಯಿತು. ವಿದ್ಯಾರ್ಥಿಗಳ ಭವಿಷ್ಯ ನಮಗೆ ಬಹಳ ಮುಖ್ಯ ನಾವು 300ಕ್ಕೂ ಹೆಚ್ಚು ಶಾಲೆ, 1000 ಕ್ಕೂ ಹೆಚ್ಚು ಮಕ್ಕಳಿಗೆ ಇದರ ಕುರಿತು ಅರಿವು ಮೂಡಿಸಿದ್ದೇವೆ. ಜಿಲ್ಲೆಯಲ್ಲಿ ಇದರ ಕುರಿತು 3 ವರ್ಷದಲ್ಲಿ 409 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಡ್ರಗ್ಸ್ ಕಾಯ್ದೆಯನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೆ ತಂದು ನಾಶಾ ಮುಕ್ತ ಅಭಿಯಾನ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಎನ್‍ಡಿಪಿಎಸ್ ಆಕ್ಟ್ ಪ್ರಕಾರ ಮಾರಾಟ ಮಾಡಿದರೆ ಪ್ರತಿಯೊಂದಕ್ಕೊ ಶಿಕ್ಷೆ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಸ್ತಾವಿಕ ನುಡಿಗಳಾನ್ನಾಡಿದ ಬಳಿಕ ಪ್ರತಿಜ್ಞಾವಿಧಿ ಭೋಧಿಸಿದರು.
ಮಾದಕ ದ್ರವ್ಯದ ಕುರಿತು ಪ್ರಬಂಧ ಬರೆದಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ, ಡಿಡಿಪಿಐ ಕೊಟ್ರೇಶ್, ಚಲನ ಚಿತ್ರ ನಟಿ ಆದಿತಿ ಪ್ರಭುದೇವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243