ದಿನದ ಸುದ್ದಿ

ದಾವಣಗೆರೆ | ಕೊರೊನಾ ಜೊತೆಗೆ ಬದುಕಿ ಗೆದ್ದು ತೋರಿಸಬೇಕಾದ ಸಂದರ್ಭವಿದು : ಮೇಯರ್ ಅಜಯ್ ಕುಮಾರ್

Published

on

ಸುದ್ದಿದಿನ, ದಾವಣಗೆರೆ: ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ ಯಾರೊಬ್ಬರು ಭಯಪಡಬೇಕಾದ ಅವಶ್ಯಕತೆಯಿಲ್ಲ. ಕೊರೊನಾ ಜೊತೆಗೆ ಬದುಕಿ ಗೆದ್ದು ತೋರಿಸಬೇಕಾದ ಸಂದರ್ಭ ಇದಾಗಿದೆ‌ ಎಂದು ಮೇಯರ್ ಬಿ.ಜಿ.ಅಜಯ ಕುಮಾರ್ ಹೇಳಿದರು.

ಕೊರೊನಾದಿಂದ ಗುಣಮುಖರಾದ ಮೂವರನ್ನು ಬುಧವಾರ ಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಇವತ್ತು ತುಂಬಾ ಸಂತೋಷದ ದಿನ. ಯಾಕೆಂದರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಸೆಂಚುರಿ ದಾಟಿದೆ. ಈ ಹಿನ್ನೆಲೆಯಲ್ಲಿ ಜನರು ಭಯಬೀತರಾಗಿದ್ದರು. ಈ ಹಿಂದೆ ಮೂರು ಕೊರೊನಾ ಪಾಸಿಟಿವ್ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಸಾರ್ವಜನಿಕರು ಅದನ್ನು ಗಮನಿಸಿರಲಿಲ್ಲ. ಆದರೆ ಇದೀಗ ಮೂವರು ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದುತ್ತಿದ್ದು, ಮಾಧ್ಯಮದ ಮೂಲಕ ನಗರದ ಜನತೆಗೆ ಧೈರ್ಯ ತುಂಬುವುದರೊಂದಿಗೆ ಧನಾತ್ಮಕ ಸಂದೇಶ ರವಾನಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ವೈದ್ಯರಿಗೆ ಮೊದಲ ಶ್ರೇಯಸ್ಸು

ಈ ಮೂವರು ಸೇರಿದಂತೆ 19 ಕೇಸ್‍ಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸೂಚನೆಯನ್ನು ಇಲ್ಲಿನ ವೈದ್ಯರು ಕೊಟ್ಟಿದ್ದಾರೆ. ವೈದ್ಯರು ತುಂಬಾ ಶ್ರದ್ಧೆ ವಹಿಸಿ ಯಾವುದೇ ಭಯವಿಲ್ಲದೆ ಸೇವೆ ಮಾಡಿ ರೋಗಿಗಳನ್ನು ನೋಡಿಕೊಂಡಿದ್ದರಿಂದ ಇವತ್ತು ಇಷ್ಟು ಜನ ಬಿಡುಗಡೆಗೊಳ್ಳುತ್ತಿದ್ದಾರೆ. ಈ ಮೂಲಕ ಮೊದಲ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕೊರೊನಾ ಪಾಸಿಟಿವ್ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆ ಮೂಲಕ ಸೆಂಚುರಿ ಕಂಡಿದೆ. ಅದೇ ರೀತಿ ಸೆಂಚುರಿಯಿಂದ ಝೀರೋ ವರೆಗೆ ಇಳಿಕೆ ಆಗುವ ವಿಶ್ವಾಸ ವ್ಯಕ್ತಪಡಿಸಿದರು.

ಹೆದರಬೇಡಿ

ಯಾವ ಕಾರಣಕ್ಕೂ ನಾವುಗಳು ಹೆದರುವ ಪ್ರಶ್ನೆಯಿಲ್ಲ. ಕೆಮ್ಮು, ಶೀತ, ನೆಗಡಿ, ಜ್ವರದಂತೆ ಕೊರೊನಾ ಕೂಡ ಒಂದು ರೋಗವಾಗಿದೆ. ಆದರೆ ಇದು ಕಣ್ಣಿಗೆ ಕಾಣುವುದಿಲ್ಲ. ಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತಹದ್ದು. ಹಾಗಾಗಿ ನಾವು ಇದರಿಂದ ಭಯಪಡದೇ, ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಇಷ್ಟು ದಿನ ಕೊರೊನಾ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಎಲ್ಲರೂ ಕೂಡ ಮನೆಯಲ್ಲಿ ಇದ್ದಿರಿ. ಆದರೆ ಇದೀಗ ತಾವೆಲ್ಲರೂ ತಮ್ಮ ತಮ್ಮ ವ್ಯವಹಾರ ಹಾಗೂ ಕೆಲಸದಲ್ಲಿ ತೊಡಗಲು ಮುಂದಾಗಬೇಕು. ಈ ಎರಡು ತಿಂಗಳು ನೀವು ಅನುಭವಿಸಿದ ಸಂಕಷ್ಟದಿಂದ ಪಾರಾಗಲು, ತಮ್ಮ ವ್ಯವಹಾರದಲ್ಲಿ ತೊಡಗಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ಸ್ಯಾನಿಟೈಜರ್ ಬಳಸಬೇಕು. ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version