ದಿನದ ಸುದ್ದಿ
ದಾವಣಗೆರೆ | ಶೀಘ್ರದಲ್ಲಿ ಜಿಲ್ಲೆಗೆ ಕೋವಿಡ್ ತಪಾಸಣಾ ಲ್ಯಾಬ್ ಮಂಜೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು
ಸುದ್ದಿದಿನ,ದಾವಣಗೆರೆ : ಶೀಘ್ರದಲ್ಲಿಯೇ ದಾವಣಗೆರೆ ಜಿಲ್ಲೆಗೆ ಕೋವಿಡ್ ತಪಾಸಣಾ ಲ್ಯಾಬ್ ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಕೊರೊನಾ ರೋಗ ನಿಯಂತ್ರಣ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಕೊರೊನಾ ತಪಾಸಣೆಗಾಗಿ 16 ಲ್ಯಾಬ್‍ಗಳಿವೆ. 10 ಹೊಸದಾಗಿ ಮಂಜೂರು ಮಾಡಲಾಗುವುದು. ಅದರಲ್ಲಿ ಒಂದನ್ನು ಜಿಲ್ಲೆಗೆ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಒಟ್ಟು 258 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 65 ಜನರು ಗುಣಮುಖರಾಗಿದ್ದಾರೆ. ಈ ಮೊದಲು ಕೊರೊನಾ ಸೋಂಕಿತರಲ್ಲಿ ರಾಜ್ಯ 3ನೇ ಸ್ಥಾನದಲ್ಲಿತ್ತು. ನಂತರ ನಿಯಂತ್ರಣ ಕ್ರಮ ಕೈಗೊಂಡ ಮೇಲೆ 12ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 10 ಸಾವಿರ ಐಸಿಯು ಬೆಡ್ ಸೌಲಭ್ಯ ಹೊಂದಿದ್ದೇವೆ. ಸರ್ಕಾರಿ ಹಾಗೂ ಖಾಸಗಿ ಸೇರಿ 700 ವೆಂಟಿಲೇಟರ್ ಸೌಲಭ್ಯವಿದೆ. ರಾಜ್ಯದ ಯಾವೊಬ್ಬ ರೋಗಿಯು ಸಹ ವೆಂಟಿಲೇಟರ್‍ಗೆ ಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಬೇಕು. ವೆಂಟಿಲೇಟರ್ ಆಪರೇಟರ್‍ಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗುವುದು.
ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ವೈದ್ಯರು, ನರ್ಸ್, ಸಿಬ್ಬಂದಿ ಹಾಗೂ ಮೆಡಿಕಲ್‍ಗೆ ಸಂಬಂಧಿಸಿದಂತೆ ಉತ್ತಮ ಸೌಲಭ್ಯವಿದೆ. ಬೇರೆ ರಾಷ್ಟ್ರಗಳ ಜನರಿಗೆ ಹೋಲಿಸಿದಲ್ಲಿ ನಮ್ಮ ದೇಶದ ಜನರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಇದು ಕೊರೊನಾ ವೈರಾಣು ನಿಯಂತ್ರಿಸಲು ಸಹಕಾರಿಯಾಗಿದೆ. ಈವರೆಗೂ ಸಹ ಕೋವಿಡ್ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಆದರೆ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ವೈರಾಣುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು.
ಸಭೆಯ ನಂತರ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಎಂಎಲ್‍ಸಿ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243