ದಿನದ ಸುದ್ದಿ

ದಾವಣಗೆರೆ | ನಿಮಗಾಗಿ ನಾವು ಬೀದಿಯಲ್ಲಿದೇವೆ ನೀವು ಮನೆಯಲ್ಲಿಯೇ ಇರಿ : ಜಿಲ್ಲಾಧಿಕಾರಿ‌

Published

on

ಸುದ್ದಿದಿನ,ದಾವಣಗೆರೆ‌ : ಅನವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿದ್ದ ವಾಹನ ಸವಾರರನ್ನು ಬಂಧಿಸಿದ್ದೇವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರಬಾರದು. ನಿಮಗಾಗಿ ನಾವು ಬೀದಿಯಲ್ಲಿದ್ದೇವೆ. ದಯಮಾಡಿ ನೀವು ಮನೆಯಲ್ಲಿಯೇ ಇರಿ ಎಂದು ಧ್ವನಿವರ್ಧಕಗಳ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಾರ್ವಜನಿಕರಿಗೆ ವಿನಂತಿ ಮಾಡಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ವತಿಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಎಂ.ಸಿ.ಸಿ ಬಿ ಬ್ಲಾಕ್, ಬಾಷಾ ನಗರ, ಹಳೇ ದಾವಣಗೆರೆ ಸೇರಿದಂತೆ ಹಲವೆಡೆ ಸಂಚರಿಸಿ ಪರಿಶೀಲನೆ ನಡೆಸಿದ ಅವರು, ಲಾಕ್‍ಡೌನ್ ಉಲ್ಲಂಘಿಸಿ ಅನವಶ್ಯಕವಾಗಿ ತಿರುಗಾಡುವವರಿಗೆ ಸಂಜೆಯತನಕ ಬಂಧಿಸಿ ಕೇವಲ ನೀರು ಮಾತ್ರ ನೀಡಿ ಎಂದು ಸೂಚಿಸಿದರು.

ಅನವಶ್ಯಕವಾಗಿ ಸುತ್ತಾಡುವವರನ್ನು ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಡೆ ಹಿಡಿದು ಬಂಧಿಸಿ ಜೀಪ್‍ನಲ್ಲಿ ಠಾಣೆಗೆ ಕಳುಹಿಸಿದರು.

ಎರಡನೇ ಹಂತದ ಲಾಕ್‍ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ದೇಶದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಈ ಹಿನ್ನೆಲೆಯಲ್ಲಿ ಅಜಾಗರೂಕತೆ ಸರಿಯಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಬೀದಿಗಿಳಿಯದೆ ಮನೆಯಲ್ಲೇ ಇದ್ದು ಸಹಕರಿಸಬೇಕು. ಮನೆಯಲ್ಲ್ದಿ ಇದ್ದರೆ ಮನೆತನ. ಹೊರಗಡೆ ಬಂದರೆ ಡೆಡ್ಲಿ ಕೊರೊನಾ.. ಎಂಬ ಘೋಷವಾಕ್ಯ ಸಹ ಹೇಳಿದ ಅವರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಗಂಗಲ್, ತಹಶೀಲ್ದಾರ್ ಗಿರೀಶ್, ದುರ್ಗಾ ಪಡೆ, ಕೆಎಸ್‍ಆರ್‍ಪಿ ತುಕಡಿ ಸಿಬ್ಬಂದಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version