ರಾಜಕೀಯ

ಸಾರ್ವಜನಿಕರಿಗೆ ಸೇವೆಸಲ್ಲಿಸುತ್ತಿರುವವರ ಮೇಲೆ ಹಲ್ಲೆ‌ ನಡೆಸಿದರೆ ಜೈಲು ಖಾಯಂ ; ಸಂಸದ ಜಿ.ಎಂ.ಸಿದ್ದೇಶ್ವರ ಎಚ್ಚರಿಕೆ

Published

on

ಸುದ್ದಿದಿನ,ದಾವಣಗೆರೆ : ವೈದ್ಯಕೀಯ ಸಿಬ್ಬಂದಿ, ನರ್ಸ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕೊರೊನಾ ಲಾಕ್‍ಡೌನ್ ವೇಳೆ ಇವರ ಮೇಲೆ ಯಾರಾದರೂ ಹಲ್ಲೆ ಹಾಗೂ ತಂಟೆ ತಕರಾರು ಮಾಡಿದಲ್ಲಿ ಜೈಲಿಗೆ ಕಳುಹಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಎಚ್ಚರಿಸಿದರು.

ಮಂಗಳವಾರ ನ್ಯಾಮತಿಯ ವೀರಶೈವ ಮಹಾಂತೇಶ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕೊರೊನಾ ವೈರಸ್ ನಿಯಂತ್ರಣ ಕುರಿತು ಹೊನ್ನಾಳಿ-ನ್ಯಾಮತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರಿನ ಪಾದರಾಯನಪುರದಲ್ಲಿ ಆಗಿರುವ ಘಟನೆಗೆ ಸಂಬಂಧಿಸಿದಂತೆ ಗಲಾಟೆ ನಡೆಸಿದ ಹಲ್ಲೆಕೋರರಲ್ಲಿ ಇಂದು ಸಹ 80 ಜನರನ್ನು ಬಂಧಿಸಿ ಕಾನೂನು ರೀತಿಯ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಅಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು. ಕೊರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಪ್ರಮುಖ ಪಾತ್ರ ವಹಿಸಿದೆ.

ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೇ 3ರವೆರೆಗೆ ಯಾರೊಬ್ಬರು ಹೊರಗೆ ಬಾರದೇ ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಬಳಸುವುದರೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ನಿಯಂತ್ರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version