ದಿನದ ಸುದ್ದಿ

ಮಕ್ಕಳಿಗೆ ಶ್ರಮದ ಮಹತ್ವ ಅರಿವಾಗಲು ಬಿಡಿ : ಪೋಷಕರಿಗೆ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಕಿವಿಮಾತು

Published

on

ಸುುದ್ದಿದಿನ, ದಾವಣಗೆರೆ : ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಬೇಡಿ. ಅವರಿಗೆ ಕೊರತೆಯ ಮಹತ್ವ ಅರಿವಾಗಲು ಬಿಡಿ ಮತ್ತು ಪ್ರಾಮಾಣಿಕ ಪರಿಶ್ರಮದ ಮೂಲಕವೇ ಬಯಸಿದ್ದನ್ನು ಪಡೆಯುವಂತೆ ಪ್ರೇರೇಪಿಸಿ ಎಂದು ದಾವಣಗೆರೆ ಜೆ.ಎಚ್ ಪಟೇಲ್ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಪೋಷಕರಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಗೋಪನಾಳು ಗ್ರಾಮದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲಾ ಆವರಣದಲ್ಲಿ ದಿನಾಂಕ : 19/01/2019 ರ ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ 2018 – 19 ನೇ ಸಾಲಿನ ಶೈಕ್ಷಣಿಕ ಸಾಲಿನ “ ವರ್ಷೋತ್ಸವ – ಪೋಷಕರ ಹರ್ಷೋತ್ಸವ ” ಕಾರ್ಯಕ್ರಮದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಮಕ್ಕಳಿಗೆ ಬೆವರಿನ ಪಾಠ ಅರಿಯಲು ಬಿಡಿ. ಮನಸ್ಸು ಸಮಾಜಕ್ಕೆ ತೆರೆದುಕೊಂಡು ಕಷ್ಟ – ಕಾರ್ಪಣ್ಯಗಳ ತಿಳಿವಳಿಕೆ ಮೂಲಕ ಎಳೆಯರು ತಮ್ಮ ಬದುಕನ್ನು ಸ್ವಾವಲಂಬಿಯಾಗಿಸಿಕೊಳ್ಳುವ ಮುಕ್ತ ವಾತಾವರಣ ಕಲ್ಪಿಸಿಕೊಡಿ ಎಂದು ಕರೆ ನೀಡಿದರು.

ಜಾನಪದ ಪರಿಷತ್‍ನ ದಾವಣಗೆರೆ ಜಿಲ್ಲಾಧ್ಯಕ್ಷರಾದ ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸವಾಂಗೀಣ ವಿಕಾಸದಲ್ಲಿ ಶಿಕ್ಷಕರೊಂದಿಗೆ ಪೋಷಕರು ಮತ್ತು ಸಮಾಜ ಕೈ ಜೋಡಿಸಿದಾಗ ಅವರ ಭವಿಷ್ಯ ಭವ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಚಾರ್ಯರಾದ ವಿ.ಸಿ ಅಂಜಿನಪ್ಪ ವಾರ್ಷಿಕ ವರದಿ ವಾಚಿಸಿ, ತಮ್ಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಪೋಷಕರು, ದಾನಿಗಳು ಮತ್ತು ಶಿಕ್ಷಕರಿಗೆ ವಂದಿಸಿದರು.

ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಐಗೂರು ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಎಲ್ಲಮ್ಮ ಶಾನವಾಡ ಅವರು ಮಕ್ಕಳ ಪ್ರತಿಭೆ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡುವ ಜೊತೆ, ಸ್ಥಳದಲ್ಲಿಯೇ ಒಂದು ಕವನ ರಚಿಸಿ ಹಾಡಿದ್ದು ವಿಶೇಷವೆನಿಸಿತು.

ಕುಬೇಂದ್ರಪ್ಪ, ಶೇಖನಾಯ್ಕ, ವೆಂಕಟೇಶ್‍ಮೂರ್ತಿ, ವೀರೇಂದ್ರ ಪಟೇಲ್, ಸಿಂದ್ಯಪ್ಪ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಜರುಗಿದ ವಿವಿಧ ಮನಮೋಹಕ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದ ಸಾವಿರಕ್ಕೂ ಹೆಚ್ಚು ಪೋಷಕರು ಮತ್ತು ಪ್ರೇಕ್ಷಕರ ಮನ ಸೂರೆಗೊಂಡವು.

Trending

Exit mobile version