ದಿನದ ಸುದ್ದಿ

ದಾವಣಗೆರೆ | ಜಿಲ್ಲಾಸ್ಪತ್ರೆಗೆ ಶೀಘ್ರದಲ್ಲೇ ಸುಸಜ್ಜಿತ ಲ್ಯಾಬ್ : ಸಚಿವ ಭೈರತಿ ಬಸವರಾಜ್

Published

on

ಸುದ್ದಿದಿನ, ದಾವಣಗೆರೆ : ಪ್ರಸ್ತುತ ನಗರದಲ್ಲಿ 63 ಸಾವಿರ ಜನರನ್ನು ಕೋವಿಡ್ ಹಿನ್ನೆಲೆ ಸಮೀಕ್ಷೆ ನಡೆಸಲಾಗಿದೆ. ಈ ಯಾರಲ್ಲೂ ಕೋವಿಡ್ ಲಕ್ಷಣಗಳು ಕಂಡುಬಂದಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸ್ತುತ 110 ಬೆಡ್‍ಗಳು ಕೋವಿಡ್ ಚಿಕಿತ್ಸೆ ನೀಡಲು ಸಿದ್ದವಿದ್ದು, ಹೆಚ್ಚಿನ ಪ್ರಕರಣಗಳು ಕಂಡುಬಂದಲ್ಲಿ ಬಾಪೂಜಿ ಮತ್ತು ಹೈಟೆಕ್ ಆಸ್ಪತ್ರೆಗಳಲ್ಲಿ ಸಹ ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ ಎಂದರು. ಪ್ರಸ್ತುತ 800 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಶೀಘ್ರದಲ್ಲೇ ಸೋಂಕಿನ ಮೂಲ ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 32 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 2 ಪ್ರಕರಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ 2 ಸಾವು ಸಂಭವಿಸಿದೆ. ಇನ್ನು 28 ಸಕ್ರಿಯ ಪ್ರಕರಣಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವೈರಸ್ ಪರೀಕ್ಷಾ ಲ್ಯಾಬ್ ಸ್ವಲ್ಪ ತಡವಾಗುತ್ತಿದೆ. ಕಾರಣ ಕೇಂದ್ರ ಸರ್ಕಾರ ಕೂಡ ದಾವಣಗೆರೆ, ಹಾವೇರಿ, ಬಳ್ಳಾರಿ ಹೀಗೆ ಎರಡು ಮೂರು ಜಿಲ್ಲೆ ಸೇರಿಸಿ ಒಂದು ಲ್ಯಾಬ್ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಎಸ್‍ಡಿಆರ್‍ಎಫ್ ಅನುದಾನದಲ್ಲೇ ಜಿಲ್ಲೆಗೆ ಪ್ರತ್ಯೇಕವಾಗಿ ಒಂದು ಲ್ಯಾಬ್‍ನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗುವುದು ಎಂದು ಕೇಂದ್ರಕ್ಕೆ ಮನವರಿಕೆ ಮಾಡಿ, ಲ್ಯಾಬ್‍ನ ಕೆಲಸ ಆರಂಭಿಸಲಾಗಿದೆ. ರೂ.74 ಲಕ್ಷದಲ್ಲಿ ಲ್ಯಾಬ್ ಯೋಜನೆ ತಯಾರಿಸಿದ್ದು ಅನುಮೋದನೆಗಾಗಿ ಆಯುಕ್ತರಿಗೆ ಕಡತವನ್ನು ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲಿ ಲ್ಯಾಬ್ ಕಾರ್ಯ ಆರಂಭಿಸಿ ಜಿಲ್ಲೆಗೆ ಒಂದು ಶಾಶ್ವತ ಲ್ಯಾಬ್ ಸಿದ್ದಪಡಿಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version