ದಿನದ ಸುದ್ದಿ
ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು : ಜಿಲ್ಲಾಧಿಕಾರಿ
ಸುದ್ದಿದಿನ,ದಾವಣಗೆರೆ : ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳು ತೆರೆದು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಶುಶ್ರೂಷಕರು, ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಹಾಜರಾಗಬೇಕು. ಯಾರಿಗೂ ಏನೂ ಆಗೋದಿಲ್ಲ. ಅದರ ಜವಾಬ್ದಾರಿ ನಮ್ಮದು. ಚಿಗಟೇರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಭಾನುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು ಜಿಲ್ಲಾ ಚಿಗಟೇರಿ ಆಸ್ಪತ್ರೆ ಕೇವಲ ಕೊರೊನಾ ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡುವ ಕೋವಿಡ್ ಆಸ್ಪತ್ರೆ ಎಂದು ಆದೇಶಿಸಲಾಗಿದೆ ಹಾಗೂ ಬಾಪೂಜಿ ಆಸ್ಪತ್ರೆಯು ಸಾರ್ವಜನಿಕ ಆಸ್ಪತ್ರೆಯಾಗಿ ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಮುಂದಿನ ಆದೇಶದವರೆಗೆ ನೀಡಲಿದೆ. ಇತರೆ ಆರೋಗ್ಯ ಸಮಸ್ಯೆಗಳಿಗೆ ಬರುವ ರೋಗಿಗಳನ್ನು ಇತರೆ ಎಲ್ಲ ಖಾಸಗಿ ಆಸ್ಪತ್ರಗಳಿಗೆ ಕಳುಹಿಸಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ 40 ಬೆಡ್‍ಗಳ ಮಕ್ಕಳ ಎಸ್‍ಎನ್‍ಸಿಯು ಮತ್ತು ಓಬಿಜಿ ವಿಭಾಗ ಇದ್ದು ಇಲ್ಲಿಗೆ ಅನೇಕ ಗ್ರಾಮೀಣ ಮಹಿಳೆಯರು ಮಕ್ಕಳು ಬರುತ್ತಾರೆ. ಆದ್ದರಿಂದ ಮುಖ್ಯ ಕಟ್ಟಡಕ್ಕೆ ಸಂಪರ್ಕಕ್ಕೆ ಬಾರದಂತೆ ಅವುಗಳಿಗೆ ಸಂಪೂರ್ಣ ಬ್ಯಾರಿಕೇಡ್ ಮಾಡಿ ಅಲ್ಲಿಂದ ಕೋವಿಡ್ ಆಸ್ಪತ್ರೆಗೆ ಯಾವುದೇ ರೀತಿಯ ಸಂಪರ್ಕ ಇರದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಿಜಿ ಆಸ್ಪತ್ರೆಯ ವೈದ್ಯರು, ನಗರದ ಎಲ್ಲ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಜೆಜೆಎಂ ಮತ್ತು ಎಸ್‍ಎಸ್ ಮೆಡಿಕಲ್ ಕಾಲೇಜಿನ ಎರಡೂ ಕಾಲೇಜುಗಳ ತಜ್ಞ ವೈದ್ಯರು, ಮುಖ್ಯಸ್ಥರು ತಂಡ ರಚಿಸಿಕೊಂಡು ಬೆಂಗಳೂರಿನ ರಾಜೀವ್‍ಗಾಂಧಿ ಹೆಲ್ತ್ ಸೈನ್ಸಸ್‍ನಲ್ಲಿ ಹೇಗೆ ತಜ್ಞವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂಬುದನ್ನು ಅಧ್ಯಯನ ಮಾಡಿ ಅದೇ ರೀತಿಯಲ್ಲಿ ಗಂಭೀರ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಕೊರೊನಾ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243