ದಿನದ ಸುದ್ದಿ
ದಾವಣಗೆರೆ | ಬರೋಬ್ಬರಿ 80 ಅಡಿ ಆಳದ ಬಾವಿಗೆ ಬಿದ್ದ ಎಮ್ಮೆ : ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ
ಸುದ್ದಿದಿನ,ದಾವಣಗೆರೆ : ಮಂಗಳವಾರ ಬೆಳಗಿನ ಜಾವ ಹರಪನಹಳ್ಳಿ ತಾಲೂಕು ಲಕ್ಷ್ಮಿಪುರ ಗ್ರಾಮದಲ್ಲಿ ಬರೋಬ್ಬರಿ 80 ಅಡಿ ಆಳದ ಬಾವಿಗೆ ಬಿದ್ದಿದ್ದ ಎಮ್ಮೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಎಮ್ಮೆಯು ಎಗರಿ ಬಾವಿಯ ಮೇಲ್ಭಾಗಕ್ಕೆ ಹೋದಾಗ ಅಲ್ಲಿದ್ದ ಜಾಲರಿಯೂ ಹರಿದು ಎಮ್ಮೆ ಬಾವಿಯೊಳಗೆ ಬಿದ್ದಿದೆ. ಅಗ್ನಿಶಾಮಕ ದಳದ 10 ಜನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಳಗ್ಗೆ 5.30 ರಿಂದ ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ಮೇಲಕ್ಕೆತ್ತಿದ್ದಾರೆ.
ಬಾವಿಯಲ್ಲಿ 7 ಅಡಿಗಳಷ್ಟು ನೀರಿತ್ತು. ಎಮ್ಮೆಯು 3 ವರ್ಷದ್ದಾಗಿದ್ದು ಗರ್ಭ ಧರಿಸಿತ್ತು. ಸುಭಾನ್ ಮತ್ತು ಆನಂದ್ ಎಂಬ ಸಿಬ್ಬಂದಿ ಬಾವಿಯೊಳಗೆ ಇಳಿದು, ಮೊದಲು ಏಣಿಯನ್ನು ಬಳಸಲು ಪ್ರಯತ್ನಿಸಿ ನಂತರ ಹಗ್ಗದ ಸಹಾಯದಿಂದ ಕೆಳಗಿಳಿದರು.
ಇತರೆ ಸಿಬ್ಬಂದಿ ಮೇಲಿನಿಂದ ಎಳೆದುಕೊಂಡು ಎಮ್ಮೆಯನ್ನು ಸುರಕ್ಷಿತವಾಗಿ ಪಾರು ಮಾಡಿದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243