ದಿನದ ಸುದ್ದಿ
ದಾವಣಗೆರೆ | ವಾಹನ ತಪಾಸಣೆ ವೇಳೆ ಲಾರಿ ಹರಿದು ಪೋಲಿಸ್ ಸಾವು ; ಲಾರಿಯೊಂದಿಗೆ ಚಾಲಕ ಪರಾರಿ
ಸುದ್ದಿದಿನ,ದಾವಣಗೆರೆ:ಹೆಬ್ಬಾಳ್ ಟೋಲ್ ಗೇಟ್ ಬಳಿಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಪೊಲೀಸ್ ಕಾನ್ ಸ್ಟೇಬಲ್ ಮೇಲೆ ಲಾರಿ ಹತ್ತಿಸಿದ ಪರಿಣಾಮ ಪೊಲೀಸ್ ಕಾನ್ ಸ್ಟೇಬಲ್ ಕಾನ್ ಸ್ಟೇಬಲ್ 32 ವರ್ಷದ ರಾಮಪ್ಪ ಪೂಜಾರಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಚಾಲಕ ಲಾರಿಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಪ್ಪ ಪೂಜಾರ್ ಅವರು ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು (DAR) ಪಡೆಯ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಟ್ರಾಫಿಕ್ ನಿಯಂತ್ರಣದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ತಮ್ಮ ಕರ್ತವ್ಯದಲ್ಲಿ ಸಮರ್ಪಿತರಾಗಿದ್ದರು ಎಂದು ಸಹೋದ್ಯೋಗಿಗಳು ಸ್ಮರಿಸಿದ್ದಾರೆ. ಈ ದುರಂತವು ಅವರ ಕುಟುಂಬ ಹಾಗೂ ಸಹೋದ್ಯೋಗಿಗಳಿಗೆ ತೀವ್ರ ಆಘಾತವನ್ನುಂಟುಮಾಡಿದೆ.
ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ದಾವಣಗೆರೆಯ ಗ್ರಾಮಾಂತರ ಠಾಣೆಯ ಕಾನ್ಸ್‌ಟೇಬಲ್ ರಾಮಪ್ಪ ಪೂಜಾರಿ ಲಾರಿಯೊಂದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಲಾರಿ ಚಾಲಕ ಲಾರಿಯನ್ನ ನಿಲ್ಲಿಸದೇ ಪೇದೆ ಮೇಲೆ ಲಾರಿ ಹತ್ತಿಸಿ ಪರಾರಿಯಾಗಿದ್ದಾನೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರಿಯವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ. ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಶವಗಾರದ ಮುಂದೆ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದ್ದು, ಕಳೆದ ದಿನ ಕಾನ್ ಸ್ಟೇಬಲ್ ರಾಮಪ್ಪ ತನ್ನ ಒಂದು ವರ್ಷದ ಮಗಳ ಹುಟ್ಟು ಹಬ್ಬ ಆಚರಣೆ ಮಾಡಿದ್ದರು. ಮದುವೆಯಾಗಿ ಅವರಿಗೆ ಒಂದು ವರ್ಷವಷ್ಟೇ ಆಗಿತ್ತು.
ಘಟನೆಯ ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್, ಐಜಿಪಿ ರವಿಕಾಂತೇಗೌಡ, ಡಿವೈಎಸ್ಪಿ ಶರಣಬಸವೇಶ್ವರ ಸೇರಿದಂತೆ ಸಿಬ್ಬಂದಿಗಳು ಆಗಮಿಸಿದ್ದರು.
ಹೆಬ್ಬಾಳ್ ಟೋಲ್ ಗೇಟ್ ನಲ್ಲಿ ಸರಿಯಾದ ಸಿಸಿ ಟಿವಿ ಅಳವಡಿಸಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ, ಇದರಿಂದ ಈ ಘಟನೆಯೂ ಕ್ಯಾಮೆರಾದಲ್ಲಿ ಸರಿಯಾಗಿ ಸೆರೆಯಾಗಿಲ್ಲ ಎಂದು ಅಧಿಕಾರಿಗಳು ಟೋಲ್ ಸಿಬ್ಬಂದಿ ವಿರುದ್ದ ಗರಂ ಆಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243